ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (Caste Survey) ಮನೆಗಳನ್ನು ಗುರುತಿಸಿ ಪಟ್ಟಿ ಮಾಡುವ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳು ನಿಯೋಜನೆಗೊಂಡಿದ್ದರಿಂದ ಕೆಲ ಗೃಹ ಜ್ಯೋತಿ(Gruha Jyothi) ಗ್ರಾಹಕರ ಬಿಲ್‌ನಲ್ಲಿ ಆಗಿದ್ದ ವ್ಯತ್ಯಯವನ್ನು ಸರಿಪಡಿಸಿ ಪರಿಷ್ಕೃತ ಬಿಲ್ ವಿತರಿಸಲಾಗುವುದು ಎಂದು ಬೆಸ್ಕಾಂ (BESCOM) ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಮೀಟರ್ ರೀಡರ್‌ಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಮನೆಗಳನ್ನು ಪಟ್ಟಿ ಮಾಡುವ ಕಾರ್ಯ ಹಾಗೂ ಮೀಟರ್ ರೀಡಿಂಗ್‌ಅನ್ನು ಪ್ರೋಬ್‌ಗಳ ಮೂಲಕ ಮೊದಲ ಬಾರಿಗೆ ನಡೆಸುತ್ತಿರುವುದರಿಂದ ವಿದ್ಯುತ್ ಬಿಲ್ ವಿತರಣೆಯ ದಿನಾಂಕವನ್ನು ಸೆ.15ನೇ ತಾರಿಕಿನಿಂದ 25ನೇ ತಾರೀಕಿನವರೆಗೆ ವಿಸ್ತರಿಸಲಾಗಿತ್ತು.
ಈ ಪ್ರಕ್ರಿಯೆಯಿಂದ ಕೆಲ ಪ್ರಕರಣಗಳಲ್ಲಿ ಗೃಹಜ್ಯೋತಿ ಗ್ರಾಹಕರಿಗೆ ಭಾಗಶಃ ಬಿಲ್ ಬಂದಿರುವುದು ಬೆಸ್ಕಾಂ ಗಮನಕ್ಕೆ ಬಂದಿದೆ. ಅವುಗಳನ್ನು ಕಳೆದ ತಿಂಗಳುಗಳ ಸರಾಸರಿಯಂತೆ ಲೆಕ್ಕ ಹಾಕಿ, ಪರಿಷ್ಕೃತ ಬಿಲ್ ನೀಡಲಾಗುತ್ತದೆ. ಈ ಮೂಲಕ ಗೃಹಜ್ಯೋತಿ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.