ರಾಮನಗರ: ಮಾವಿನ ತೋಪಿನಲ್ಲಿ ಹಾಕಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದು ಮಾವಿನ ತೋಪು ಭಸ್ಮವಾಗಿದ್ದಲ್ಲದೇ, ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬೆಂಕಿಯಿಂದ ಸುಟ್ಟ ಗಾಯಗಳಿಗೆ ಒಳಗಾಗಿರುವ ಘಟನೆ ರಾಮನಗರ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದಿದೆ.
ಅಕ್ಕೂರು ಗ್ರಾಮದ ರೈತ ಸಂಪಂಗಿ ಎಂಬವರ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಮಾವಿನ ಸಸಿಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಮಧ್ಯಾಹ್ನದ ಉರಿ ಬಿಸಿಲಿನ ವೇಳೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ಮಾರ್ಗದಲ್ಲಿ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಈ ವೇಳೆ ಉಂಟಾದ ಬೆಂಕಿಯ ಕಿಡಿಯಿಂದ ಬೆಂಕಿ ಹೊತ್ತಿದ್ದು, ಕ್ಷಣಾರ್ಧದಲ್ಲಿಯೇ ಇಡೀ ತೋಟವನ್ನು ಆವರಿಸಿ ಹೊತ್ತಿ ಉರಿದಿದೆ.
ರೈತ ಸಂಪಗಿ ಬೆಂಕಿ ಹೊತ್ತಿದ್ದ ವೇಳೆ ತೋಟದಲ್ಲಿಯೇ ಕೆಲಸ ಮಾಡುತ್ತಿದ್ದರು. ಬೆಂಕಿ ತೋಟವನ್ನು ಆವರಿಸುತ್ತಿದ್ದ ಹಿನ್ನೆಲೆಯಲ್ಲಿ ಹಸಿ ಸೊಪ್ಪಿನ ಕಡ್ಡಿಗಳನ್ನು ಹಿಡಿದು ಬೆಂಕಿಯನ್ನು ಆರಿಸಲು ಮುಂದಾಗಿದ್ದಾರೆ. ಆದರೆ ಮೊದಲೇ ಒಣಗಿ ಹೋಗಿದ್ದ ಹುಲ್ಲು, ಅಂಚಿ ಹಾಗೂ ಕಸಕಡ್ಡಿಗಳಿಂದ ಬೆಂಕಿಯ ಕೆನ್ನಾಲಿಗೆ ಜೋರಾಗಿದ್ದು ರೈತ ಸಂಪಂಗಿಗೂ ಬೆಂಕಿ ಹೊತ್ತಿದೆ.
ಈ ಘಟನೆಯಲ್ಲಿ ರೈತ ಸಂಪಂಗಿ ಹಾಕಿಕೊಂಡಿದ್ದ ಬಟ್ಟೆಗೆ ಬೆಂಕಿ ಹೊತ್ತಿದ್ದು ಬೆನ್ನು, ತಲೆ, ಕಾಲು, ಕೈಗಳಿಗೆ ಸುಟ್ಟು ಗಾಯಗಳಾಗಿದ್ದು, ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಉತ್ತಮ ಮಳೆಯಿಂದ ಈ ಬಾರಿ ಉತ್ತಮ ಫಸಲು ಬಿಡುವ ಮುನ್ಸೂಚನೆಯಾಗಿ ತೋಟದಲ್ಲಿದ್ದ ಮಾವಿನ ಸಸಿಗಳೆಲ್ಲ ಹೂ ಬಿಟ್ಟು, ಮಾವಿನ ಪೀಚುಗಳ ಗೊಂಚಲು ನೇತಾಡಿತ್ತಿದ್ದವು. ಆದರೆ ಇದೀಗ ಮಾವಿನ ತೋಟವೇ ಹೊತ್ತಿ ಉರಿಯುವುದರ ಜೊತೆಗೆ ರೈತ ಸಂಪಂಗಿಯೂ ಸುಟ್ಟು ಗಾಯಗಳಿಗೆ ಒಳಗಾಗಿರುವುದು ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.