ಕೊಪ್ಪಳ: ಲೋಕಸಭಾ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಇತ್ತ ಚುನಾವಣೆ ಮರುದಿನವೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಪರವಾಗಿ ಕೊಪ್ಪಳದಲ್ಲಿ ಬೆಟ್ಟಿಂಗ್ ಜೋರಾಗಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರ ಸಾಕಷ್ಟು ಸುದ್ದಿಯಾಗಿದ್ದ ಕ್ಷೇತ್ರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನರ ಪ್ರತಿಷ್ಠೆಯ ಕಣ ಇದಾಗಿತ್ತು. ಎರಡು ದಿನದ ಹಿಂದೆ ಚುನಾವಣೆ ಮುಗಿದು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಸಂಗಣ್ಣ ಕರಡಿ ಯೋಗ ಮಾಡಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಸ್ವಗ್ರಾಮ ಹಿಟ್ನಾಳದಲ್ಲಿ ಠಿಕಾಣಿ ಹೂಡಿದ್ದಾರೆ.
ಅಭ್ಯರ್ಥಿಗಳಿಬ್ಬರು ರಿಲ್ಯಾಕ್ಸ್ ಮೂಡಲ್ಲಿದ್ದರೆ, ಕೊಪ್ಪಳ ನಗರದಲ್ಲಿ ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಜೋರಾಗಿದೆ. ಅದರಲ್ಲೂ ಅಹಿಂದ ವರ್ಗದ ಜನ ರಾಜಶೇಖರ್ ಹಿಟ್ನಾಳ್ ಗೆಲ್ಲುತ್ತಾರೆ ಎಂದು ಬೆಟ್ ಕಟ್ಟುತ್ತಿದ್ದಾರೆ. ಐವತ್ತು ಸಾವಿರದಿಂದ ಹಿಡಿದು ಬೆಟ್ ಲಕ್ಷ ಲಕ್ಷ ದಾಟಿದೆ. ಹಣ ಅಲ್ಲದೆ ಕೆಲವು ಹಳ್ಳಿಗಳಲ್ಲಿ ಜಮೀನಿನ ಮೇಲೆ ಬೆಟ್ ಕಟ್ಟುತ್ತಿದ್ದಾರೆ ಎನ್ನಲಾಗಿದೆ.
ಕುರುಬ ಹಾಗೂ ಮುಸ್ಲಿಂ ಮತದಾರರು ಅತೀ ಹೆಚ್ಚು ಇರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅವರೆಡು ಸಮುದಾಯದ ಮತಗಳು ರಾಜಶೇಖರ್ ಹಿಟ್ನಾಳ್ ಅವರಿಗೇ ಬಿದ್ದಿದೆ ಎಂದು ಅಂದುಕೊಂಡು ಬೆಟ್ ಕಟ್ಟುತ್ತಿದ್ದಾರೆ ಎಂದು ಸ್ಥಳೀಯರಾದ ಆರತಿ ತಿಪ್ಪಣ್ಣ ಹೇಳಿದ್ದಾರೆ.
ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕ್ಷೇತ್ರಗಳಿವೆ. ಬೆಟ್ ಕಟ್ಟೋರು ಕ್ಷೇತ್ರವಾರು ಯಾವ ಪಾರ್ಟಿ ಲೀಡ್ ಬರತ್ತದೆ ಅನ್ನೋ ವಿಷಯಕ್ಕೂ ಬೆಟ್ ಕಟ್ಟುತ್ತಿದ್ದಾರೆ. ಬಹುತೇಕರು ಈ ಬೆಟ್ ಕಟ್ಟೋರು ಸಂಸದರು ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರಾಗಿದ್ದಾರೆ. ಕೊಪ್ಪಳ ನಗರಸಭೆ ಸದಸ್ಯರು ಬೆಟ್ ಕಟ್ಟುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬಿಜೆಪಿ ಸದಸ್ಯ ಮಲ್ಲಪ್ಪ, ಕವಲೂರ ಬಿಜೆಪಿ ಗೆಲ್ಲುತ್ತದೆ ಎಂದು 25 ಲಕ್ಷ ಬೆಟ್ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.