ನವದೆಹಲಿ: ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ನಾಳೆ (ಭಾನುವಾರ) ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯೋಗದ ಮಾಹಿತಿಗಳ ಪ್ರಕಾರ ನಾಳೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸಗಢದಲ್ಲಿ ಮತ ಎಣಿಕೆ ನಡೆಯಲಿದ್ದು, ಮಿಜೋರಾಂನ ಮತ ಎಣಿಕೆ ಸೋಮವಾರ ನಡೆಯಲಿದೆ.
ಡಿಸೆಂಬರ್ 3 ರಂದು ಭಾನುವಾರ ಆಗಿದ್ದು, ಕ್ರಿಶ್ಚಿಯನ್ನರ ಪವಿತ್ರ ದಿನವಾಗಿದೆ. ಆ ಕಾರಣಕ್ಕಾಗಿ ಮಿಜೋರಾಂನಲ್ಲಿ ಎನ್‌ಜಿಒ ಸಮನ್ವಯ ಸಮಿತಿ ಪ್ರತಿಭಟನೆಗಳನ್ನು ನಡೆಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗವು ದಿನಾಂಕವನ್ನು ಪರಿಷ್ಕರಿಸಿದ್ದು, ಡಿಸೆಂಬರ್ 3 ರ ಬದಲಾಗಿ ಡಿಸೆಂಬರ್ 4 ಕ್ಕೆ ಮತ ಎಣಿಕೆ ಕಾರ್ಯ ನಡೆಸುವುದಾಗಿ ತಿಳಿಸಿದೆ.
Advertisement
ನಾಲ್ಕು ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಹಾಗೂ ಬಿಆರ್ಎಸ್ ನಡುವೆ ಪೈಪೋಟಿ ಇದೆ. ಒಟ್ಟು 119 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 60 ಬೇಕಿದೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ ಎಂದು ಭವಿಷ್ಯ ನುಡಿದಿವೆ. ಮಧ್ಯಪ್ರದೇಶದ ಒಟ್ಟು 230 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರಳ ಬಹುಮತ 116 ಬೇಕಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದ್ದು, ಬಿಜೆಪಿ 100-123 ಹಾಗೂ ಕಾಂಗ್ರೆಸ್ 102-125 ಸ್ಥಾನಗಳನ್ನು ಪಡೆಯಲಿದೆ ಎಂದು ಜನ್ ಕಿ ಬಾತ್ ಹೇಳಿದೆ. ಇನ್ನು ರಿಪಬ್ಲಿಕ್ ಟಿವಿ ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 118-130 ಸಿಕ್ಕರೆ, ಕಾಂಗ್ರೆಸ್‌ಗೆ 97-107 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.
Advertisement
ಛತ್ತೀಸ್‌ಗಢದಲ್ಲಿ 90 ಸ್ಥಾನಗಳಲ್ಲಿ 46 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದ್ದು, ಕಾಂಗ್ರೆಸ್ 40-50 ಸ್ಥಾನಗಳನ್ನು ಮತ್ತು ಬಿಜೆಪಿ 36-46 ಸ್ಥಾನಗಳಲ್ಲಿ ಗೆಲುವಿನ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಹೇಳುತ್ತದೆ. ರಾಜಸ್ಥಾನದಲ್ಲಿ 200 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 101 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಟಿವಿ9 ಭಾರತ್ ವರ್ಷ್ ಸಮೀಕ್ಷೆ ಪ್ರಕಾರ, ಬಿಜೆಪಿ 100-110, ಕಾಂಗ್ರೆಸ್ 90-100, ಇತರರು 5-15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ, ಬಿಜೆಪಿ 100-112, ಕಾಂಗ್ರೆಸ್ 62-85, ಇತರರು 14-15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ.
Advertisement
ಮಿಜೋರಾಂನಲ್ಲಿ 40 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 21 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಮಿಜೋರಾಂನಲ್ಲಿ ಎಮ್‌ಎನ್‌ಎಫ್‌ಗೆ 10-14 ಕ್ಷೇತ್ರಗಳು, ZPM 15-25 ಕ್ಷೇತ್ರಗಳು, ಕಾಂಗ್ರೆಸ್ 5-9 ಕ್ಷೆತ್ರಗಳು, ಬಿಜೆಪಿ 0-2 ಕ್ಷೇತ್ರಗಳು ಲಭ್ಯವಾಗಲಿವೆ.