ನವದೆಹಲಿ: ದೇಶಾದ್ಯಂತ ಜಾತಿ ಗಣತಿ (Caste Survey) ಮಾಡಲು ಮುಂದಾಗಿದ್ದ ಕಾಂಗ್ರೆಸ್‌ಗೆ (Congress) ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳ ಚುನಾವಣೆ ಫಲಿತಾಂಶ ಬಿಗ್ ಶಾಕ್ ನೀಡಿದೆ.
ದೇಶಾದ್ಯಂತ ಜಾತಿ ಗಣತಿ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಸ್ವತ: ರಾಹುಲ್ ಗಾಂಧಿಯಾಗಿ (Rahul Gandhi) ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ದೇಶಾದ್ಯಂತ ಜಾತಿ ಗಣತಿ ಮಾಡುತ್ತೇವೆ ಎಂದು ಘೋಷಿಸಿದ್ದರು.
ಹಿಂದಿ (Hindi) ಬೆಲ್ಟ್ ರಾಜ್ಯಗಳಲ್ಲಿ ಪ್ರಬಲವಾಗಿರುವ ಬಿಜೆಪಿಯನ್ನು ಒಡೆಯಲು ಕಾಂಗ್ರೆಸ್ ಜಾತಿ ಸಮೀಕ್ಷೆ ಅಸ್ತ್ರವನ್ನು ಮುಂದಿಟ್ಟಿತ್ತು. ಈ ಅಸ್ತ್ರಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ (PM Narendra Modi) ಅವರು ಕಾಂಗ್ರೆಸ್ ಹಿಂದೂಗಳನ್ನು ಒಡೆಯಲು ನೋಡುತ್ತಿದೆ. ಬಡವರನ್ನು ವಿಭಜಿಸಲು ಪ್ರಯತ್ನಿಸ್ತಿದೆ. ದೇಶದ ವಿನಾಶಕ್ಕೆ ಮುಂದಾಗಿದೆ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ – #ModiKiGuarantee ಫುಲ್ ಟ್ರೆಂಡ್
ಬಿಜೆಪಿಗೆ ನಗರ ಪ್ರದೇಶದಲ್ಲಿ, ಕಾಂಗ್ರೆಸ್‌ಗೆ ಗ್ರಾಮೀಣ ಭಾಗದಲ್ಲಿ ಮತ ಹಾಕುತ್ತಾರೆ ಎನ್ನುವುದು ರಾಜಕೀಯ ಲೆಕ್ಕಾಚಾರ. ಆದರೆ ಈ ಮೂರು ರಾಜ್ಯಗಳಲ್ಲಿ ಗ್ರಾಮೀಣ ಭಾಗದ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. ಅದರಲ್ಲೂ ಬುಡಕಟ್ಟು ಸಮುದಾಯದವರಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಿದೆ ಎಂಬ ವಿಶ್ಲೇಷಣೆ ಈಗ ಕೇಳಿ ಬಂದಿದೆ. ಇದನ್ನೂ ಓದಿ: ಮತ್ತೆ ಮಾಮಾಜಿ ಮ್ಯಾಜಿಕ್ – ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಿದ್ದು ಹೇಗೆ?
ಛತ್ತೀಸ್‌ಗಢದಲ್ಲಿ 29ರ ಪೈಕಿ 19, ಮಧ್ಯಪ್ರದೇಶದಲ್ಲಿ 47ರ ಪೈಕಿ 27, ರಾಜಸ್ಥಾನದಲ್ಲಿ 25ರ ಪೈಕಿ 11 ಸ್ಥಾನಗಳು ಬುಡಕಟ್ಟು ಬುಡಕಟ್ಟು ಸಮುದಾಯದವರಿಗೆ ಮೀಸಲಾಗಿತ್ತು.
ಚುನಾವಣೆ ಪ್ರಚಾರದ ವೇಳೆ ಈ ಕ್ಷೇತ್ರಗಳಲ್ಲಿ ದ್ರೌಪದಿ ಮುರ್ಮು ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಒಡಿಶಾದ ಆದಿವಾಸಿ ಸಮುದಾಯದ ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ನೇಮಿಸುವ ಮೂಲಕ ಈ ಸಮುದಾಯಕ್ಕೆ ಬಿಜೆಪಿ ಗೌರವ ಸಲ್ಲಿಸಿದೆ ಎಂದು ಹೇಳಿಕೊಂಡಿತ್ತು.
ಪ್ರತಿ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯ ಬಿಜೆಪಿ ಕಡೆಗೆ ವಾಲುತ್ತಿರುವುದು ಲೋಕಸಭಾ ಚುನಾವಣೆಯಲ್ಲೇ ಸ್ಪಷ್ಟವಾಗಿತ್ತು. 2014 ಮತ್ತು 2019ರ ಚುನಾವಣೆ ತೆಗೆದುಕೊಂಡರೆ ಬಿಜೆಪಿ ಬುಡಕಟ್ಟು ಜನರಿಗೆ ಮೀಸಲಾಗಿರುವ ಹೆಚ್ಚಿನ ಕ್ಷೇತ್ರವನ್ನು ಗೆದ್ದುಕೊಂಡಿತ್ತು. 2014ರಲ್ಲಿ 47ರ ಪೈಕಿ 26 ಸ್ಥಾನ ಗೆದ್ದುಕೊಂಡರೆ 2019ರಲ್ಲಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಜಾತಿ ಸಮೀಕ್ಷೆಯ ಅಸ್ತ್ರವನ್ನು ಮುಂದಿಟ್ಟಿದ್ದ ಕಾಂಗ್ರೆಸ್ ಪ್ರಯತ್ನಕ್ಕೆ ಈಗ ಸೋಲಾಗಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಈ ಅಸ್ತ್ರವನ್ನು ಮುಂದುವರಿಸುತ್ತಾ? ಇಲ್ಲವೋ ಎನ್ನುವುದು ಸದ್ಯದ ಕುತೂಹಲ.