ಶಿವಮೊಗ್ಗ: ಕುರುಬ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜ್ಯಾದ್ಯಂತ ಇಂದು ಮತದಾನ ನಡೆಯುತ್ತಿದೆ. ಆದರೆ ಚುನಾವಣಾಧಿಕಾರಿಗಳ ಎಡವಟ್ಟಿನಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ಸ್ಥಗಿತಗೊಂಡಿದೆ.
ಶಿವಮೊಗ್ಗದ ದುರ್ಗಿಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುರುಬ ಸಮಾಜದ ನಿರ್ದೇಶಕ ಸ್ಥಾನಕ್ಕೆ ಇಂದು ಬೆಳಗ್ಗೆಯಿಂದ ಮತದಾನ ನಡೆಯುತ್ತಿತ್ತು. ಕೆಲವು ಮತದಾರರು ಮತದಾನವನ್ನು ಸಹ ಮಾಡಿದ್ದರು. ಆದರೆ ಶಿವಮೊಗ್ಗ ಜಿಲ್ಲೆಯ ಬ್ಯಾಲೆಟ್ ಪೇಪರ್ ಬದಲಿಗೆ ಬೀದರ್ ಜಿಲ್ಲೆಯ ಬ್ಯಾಲೆಟ್ ಪೇಪರ್ ರವಾನೆಯಾಗಿದ್ದವು. ಇದನ್ನು ಗಮನಿಸದ ಚುನಾವಣಾ ಅಧಿಕಾರಿಗಳು ಸಹ ಮತದಾನ ಆರಂಭಿಸಿದ್ದರು.
Advertisement
Advertisement
ಬ್ಯಾಲೆಟ್ ಪೇಪರ್ ಬದಲಾಗಿರುವುನ್ನು ಗಮನಿಸಿದ ಕೆಲವು ಮತದಾರರು ಅಭ್ಯರ್ಥಿಗಳ ಗಮನಕ್ಕೆ ತಂದಿದ್ದಾರೆ. ನಂತರ ಎಚ್ಚೆತ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮತದಾನ ಕೇಂದ್ರದಲ್ಲಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿ ಮತದಾರರು ಹಾಗು ಅಭ್ಯರ್ಥಿಗಳು ಚುನಾವಣಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಅರಿತ ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದರು.
Advertisement
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತದಾನ ಸ್ಥಗಿತಗೊಂಡಿದ್ದರಿಂದ ಮನನೊಂದ ಅಭ್ಯರ್ಥಿಗಳು ಕಣ್ಣೀರು ಹಾಕುತ್ತಾ ಮನೆಯತ್ತ ತೆರಳಿದರು. ಬ್ಯಾಲೆಟ್ ಪೇಪರ್ ಅದಲು ಬದಲಾಗಿ ಮತದಾನ ಸ್ಥಗಿತಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಮತ್ತೆ ಮತದಾನದ ದಿನಾಂಕ ತಿಳಿಸಲಾಗುವುದು ಎಂದು ಚುನಾವಣಾಧಿಕಾರಿ ಪಾಶ ತಿಳಿಸಿದ್ದಾರೆ.