ಬೆಂಗಳೂರು: ಪ್ರತಿ ವರ್ಷ ವೋಟ್ ಮಾಡುವವರ ಸಂಖ್ಯೆಯನ್ನ ಅಧಿಕ ಮಾಡಲು ಚುನಾವಣಾ ಆಯೋಗ ನಾನಾ ರೀತಿಯ ಕಸರತ್ತು ಮಾಡುತ್ತಾ ಇದೆ. ಆದರೆ ಸಂಖ್ಯೆ ಮಾತ್ರ ವೃದ್ದಿಸುತ್ತಿಲ್ಲ. ಅದಕ್ಕಾಗಿ ಇಲ್ಲೊಬ್ಬರು ಸಮಾಜ ಸೇವಕ ಜೆರಾಕ್ಸ್ ಅಂಗಡಿ ಇಟ್ಟು ಮೊದಲ ಬಾರಿ ವೋಟ್ ಮಾಡುವ ಕಾಲೇಜು ವಿಧ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಿದ್ದಾರೆ.
ಈ ಬಾರಿಯ ಚುನಾವಾಣೆ ನಾನಾ ಕಾರಣಗಳಿಗೆ ತೀವ್ರ ಕುತೂಹಲ ಕೆರಳಿಸಿದೆ. ಹಾಗಾಗಿ ಪ್ರತಿಯೊಬ್ಬರು ವೋಟ್ ಮಾಡಿ ನಮಗೆ ಸೂಕ್ತವೆನಿಸುವ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಿ ಅನ್ನೋ ಘೋಷಣೆಗಳು ಎಲ್ಲೆಡೆ ಕೇಳಿ ಬರುತ್ತಿದೆ. ಈ ಘೋಷಣೆಗಳ ಮಧ್ಯೆ ವಿಶ್ವೇಶ್ವರ ಅವರು ತುಂಬ ವಿಭಿನ್ನವಾಗಿಯೇ ಚುನಾವಣೆ ಪ್ರಚಾರ ಮಾಡಿದ್ದಾರೆ.
ನಾನು ವೋಟ್ ಮಾಡಿ ಅಂತ ಜನಜಾಗೃತಿ ಮೂಡಿಸುವ ಜೊತೆಗೆ ಮೊದಲ ಬಾರಿಗೆ ವೋಟ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ 25 ಪೈಸೆಗೆ ಜೆರಾಕ್ಸ್ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದೇನೆ. ಅಷ್ಟೇ ಅಲ್ಲದೇ ತನ್ನ ಅಂಗಡಿ ಮುಂದೆ ದೊಡ್ಡ ಬೋರ್ಡ್ ಹಾಕಿದ್ದು, ನನ್ನ ಶಾಪಿಗೆ ಬರುವ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಮಾಡುತ್ತಿದ್ದೇನೆ ಎಂದು ಸಮಾಜ ಸೇವಕ ವಿಶ್ವೇಶ್ವರ ಹೇಳಿದ್ದಾರೆ. ಇದನ್ನೂ ಓದಿ: ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್
ಈ ಆಫರ್ 1 ತಿಂಗಳ ಕಾಲ ಜಾರಿಯಲ್ಲಿರಲಿದ್ದು, ವೋಟ್ ಹಾಕಿದವರು ಕಾಲೇಜು ಐಡಿ ಮತ್ತು ಮತದಾನದ ಗುರುತಿನೊಂದಿಗೆ ಅಂಗಡಿಗೆ ಬಂದರೆ ಸಾಕು ಈ ಆಫರ್ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪ್ರಾಜೆಕ್ಟ್ ವರ್ಕ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ಸೌಲಭ್ಯವನ್ನು ಸಹ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.