ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ (Karnataka Election) ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದ ಉತ್ತರ ಕನ್ನಡದ ಇಬ್ಬರೂ ಬಿಜೆಪಿ (BJP) ನಾಯಕರಿಗೆ ಚುನಾವಣಾ ಆಯೋಗ (Election commission) ನೋಟಿಸ್ ನೀಡಿದೆ. ನಾಯಕರು ಹೆಚ್ಚು ಹಣ ಖರ್ಚು ಮಾಡಿದ್ದರೂ ಸಹ ಸರಿಯಾದ ಲೆಕ್ಕ ನೀಡದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದೆ.
ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಾಜಿ ಕಾರ್ಮಿಕ ಸಚಿವ ಹಾಗೂ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಭಟ್ಕಳ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸುನೀಲ್ ನಾಯ್ಕ ಅವರಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ಇಬ್ಬರೂ ಮುಖಂಡರೂ 40 ಲಕ್ಷ ರೂ.ಗಿಂತಲೂ ಅಧಿಕ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಚುನಾವಣಾ ಆಯೋಗ ವಿಧಾನಸಭಾ ಚುನಾವಣಾ ವೆಚ್ಚಕ್ಕೆ 40 ಲಕ್ಷ ರೂ. ಮಿತಿ ಹೇರಿದೆ. ಆದರೆ ಈ ನಾಯಕರು ಅದಕ್ಕಿಂತಲೂ ಅಧಿಕ ಹಣ ಖರ್ಚು ಮಾಡಿರುವುದು ಆಯೋಗ ನೋಟಿಸ್ ನೀಡಲು ಕಾರಣವಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ವಿಪಕ್ಷಗಳ ನಾಯಕರ ಸಭೆ – ಮತ್ತೆ ದಿನಾಂಕ ಮುಂದೂಡಿಕೆ
Advertisement
ಮೇ 3ರಂದು ಅಂಕೋಲಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ವೇಳೆ ಜನರನ್ನು ಕರೆತರಲು ನೂರಕ್ಕೂ ಹೆಚ್ಚು ವಾಯುವ್ಯ ಸಾರಿಗೆ ಬಸ್‍ಗಳನ್ನು ಬುಕ್ ಮಾಡಿದ್ದರು. ಇದರ ಖರ್ಚನ್ನು ಆಯೋಗಕ್ಕೆ ಸಲ್ಲಿಸಿದ ಲೆಕ್ಕಪತ್ರದಲ್ಲಿ ನಮೂದು ಮಾಡಿರಲಿಲ್ಲ. ಈ ಸಮಾವೇಶದ ಸಭಾ ವೆಚ್ಚವನ್ನು ಬಿಜೆಪಿಯ ಎಲ್ಲಾ 6 ಅಭ್ಯರ್ಥಿಗಳಿಗೆ ಸಮನಾಗಿ ಹಂಚಿಕೆ ಮಾಡಲಾಗಿತ್ತು. ಒಬ್ಬೊಬ್ಬ ಅಭ್ಯರ್ಥಿಗೂ ತಲಾ 18,19,978 ರೂ. ವೆಚ್ಚದಂತೆ ಹಂಚಿಕೆ ಮಾಡಲಾಗಿದೆ.
Advertisement
Advertisement
ಶಿರಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರತಾಗಿ ಉಳಿದೆಲ್ಲ ಅಭ್ಯರ್ಥಿಗಳ ವೆಚ್ಚದ ವಿವರದಲ್ಲಿ ಈ ಲೆಕ್ಕವನ್ನು ಸೇರಿಸಲಾಗಿದೆ. ಆದರೇ ಚುನಾವಣಾ ವೀಕ್ಷಕರು ಸಲ್ಲಿಸಿದ ಶಾಡೋ ಅಕೌಂಟ್ ನಲ್ಲಿ ಇವರ ಖರ್ಚು ಹೆಚ್ಚಾಗಿರುವುದು ಕಂಡು ಬಂದಿದೆ. ಶಾಸಕ ಶಿವರಾಮ್ ಹೆಬ್ಬಾರ್ ನಿಗದಿಗಿಂತ 1.5 ಲಕ್ಷ ರೂ ಹೆಚ್ಚು ಖರ್ಚು ಮಾಡಿದ್ದಾರೆ. ಸುನಿಲ್ ನಾಯ್ಕ 40 ಲಕ್ಷ ರೂ. ನಿಗದಿಗಿಂತ 5 ಲಕ್ಷ ರೂ. ಹೆಚ್ಚು ಖರ್ಚು ಮಾಡಿದ್ದಾರೆ.
Advertisement
ಜಿಲ್ಲೆಯ 6 ಕ್ಷೇತ್ರದ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಖರ್ಚು ವೆಚ್ಚದ ದಾಖಲೆ ಸಲ್ಲಿಸಿದ್ದಾರೆ. ಬಿಜೆಪಿಯ ಬಹುತೇಕ ಅಭ್ಯರ್ಥಿಗಳ ವೆಚ್ಚ 32 ಲಕ್ಷ ರೂ. ದಾಟಿದ್ದರೆ, ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು 20 ಲಕ್ಷ ರೂ.ಗಿಂತ ಕಡಿಮೆ ವೆಚ್ಚ ಮಾಡಿದ್ದಾಗಿ ಮಾಹಿತಿ ಸಲ್ಲಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರಿಗೆ ಗರಿಷ್ಠ 28 ಲಕ್ಷ ರೂ. ವೆಚ್ಚದ ಮಿತಿ ನಿಗದಿಪಡಿಸಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ವೆಚ್ಚದ ಮಿತಿ ಸಡಿಲಗೊಳಿಸಿದ್ದ ಆಯೋಗ ಅದನ್ನು ಗರಿಷ್ಠ 40 ಲಕ್ಷ ರೂ.ಗೆ ಏರಿಕೆ ಮಾಡಿತ್ತು. ಜಿಲ್ಲೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ಆಯೋಗ ನಿಗದಿಪಡಿಸಿದ್ದ ಮಿತಿಗಿಂತ ಹೆಚ್ಚು ವೆಚ್ಚ ಮಾಡಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಒಟ್ಟೂ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಈ ಪೈಕಿ ಬಿಜೆಪಿ ಅಭ್ಯರ್ಥಿಗಳಲ್ಲಿ ಬಹುತೇಕರು ಹೆಚ್ಚು ವೆಚ್ಚ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ. ಸಮಾವೇಶ, ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಬೂತ್ ಏಜೆಂಟರ ವೆಚ್ಚವನ್ನೇ ಬಹುತೇಕ ಅಭ್ಯರ್ಥಿಗಳು ಹೆಚ್ಚು ತೋರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ನಿಗದಿಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಮತ್ತೊಮ್ಮೆ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ ಶಂಭು ಶಟ್ಟಿ ಅವರು ಆಗ್ರಹಿಸಿದ್ದಾರೆ.
ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ತಲಾ 30 ಲಕ್ಷ ರೂ. ಬಿಜೆಪಿ ತಲಾ 20 ಲಕ್ಷ ರೂ. ಪಕ್ಷದ ನಿಧಿಯಿಂದ ನೀಡಿದ್ದಾಗಿ ಆಯಾ ಪಕ್ಷಗಳ ಅಭ್ಯರ್ಥಿಗಳು ಘೋಷಿಸಿದ್ದಾರೆ. ಆದರೆ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ಶಿವರಾಮ ಹೆಬ್ಬಾರ್ ತಾವು ಪಕ್ಷದ ನಿಧಿ ಪಡೆದಿಲ್ಲ ಎಂದು ಘೋಷಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳೆಲ್ಲರೂ ಪಕ್ಷದಿಂದ ಯಾವುದೇ ನಿಧಿ ಪಡೆದಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಹೆಚ್ಚು ವೆಚ್ಚ ಮಾಡಿರುವ ಆರೋಪ ಸಾಬೀತಾದಲ್ಲಿ ಯಲ್ಲಾಪುರ ಶಾಸಕ ಹೆಬ್ಬಾರ್ ರವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ಅಲ್ಲದೇ ಭಟ್ಕಳ ಬಿಜೆಪಿ ಮಾಜಿ ಶಾಸಕ ಸುನೀಲ್ ನಾಯ್ಕ 6 ವರ್ಷ ಚುನಾವಣೆ ಸ್ಪರ್ಧೆಯಿಂದ ಅನರ್ಹರಾಗಲಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ- ವಿಸ್ತೃತ ವರದಿ ಕೇಳಿದ ಸುಪ್ರೀಂ ಕೋರ್ಟ್
ಪ್ರಮುಖ ಅಭ್ಯರ್ಥಿಗಳ ವೆಚ್ಚದ ವಿವರ
ಆರ್.ವಿ.ದೇಶಪಾಂಡೆ, ಹಳಿಯಾಳ, ಕಾಂಗ್ರೆಸ್ – 31,96,648 ರೂ.
ಸುನೀಲ್ ಹೆಗಡೆ – ಹಳಿಯಾಳ, ಬಿಜೆಪಿ – 38,37,316 ರೂ.
ಎಸ್.ಎಲ್.ಘೋಟ್ನೇಕರ್, ಹಳಿಯಾಳ, ಜೆಡಿಎಸ್ -20,52,429 ರೂ.
ರೂಪಾಲಿ ನಾಯ್ಕ, ಕಾರವಾರ, ಬಿಜೆಪಿ – 32,02,558 ರೂ.
ಸತೀಶ್ ಸೈಲ್, ಕಾರವಾರ, ಕಾಂಗ್ರೆಸ್ – 13,68,526 ರೂ.
ಚೈತ್ರಾ ಕೊಠಾರಕರ್, ಕಾರವಾರ, ಜೆಡಿಎಸ್ – 6,89,545 ರೂ.
ದಿನಕರ ಶೆಟ್ಟಿ, ಕುಮಟಾ, ಬಿಜೆಪಿ – 37,02,136 ರೂ.
ನಿವೇದಿತ್ ಆಳ್ವ, ಕುಮಟಾ, ಕಾಂಗ್ರೆಸ್ – 32,37,114 ರೂ.
ಸೂರಜ್ ನಾಯ್ಕ ಸೋನಿ, ಕುಮಟಾ, ಜೆಡಿಎಸ್, 14,90,730 ರೂ.
ಸುನೀಲ ನಾಯ್ಕ, ಭಟ್ಕಳ, ಬಿಜೆಪಿ – 30,48,984 ರೂ.
ಮಂಕಾಳ ವೈದ್ಯ, ಭಟ್ಕಳ, ಕಾಂಗ್ರೆಸ್ – 17,82,563 ರೂ.
ನಾಗೇಂದ್ರ ನಾಯ್ಕ, ಭಟ್ಕಳ, ಜೆಡಿಎಸ್ – 3,67,031 ರೂ.
ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ, ಬಿಜೆಪಿ – 15,58,089 ರೂ.
ಭೀಮಣ್ಣ ನಾಯ್ಕ, ಶಿರಸಿ, ಕಾಂಗ್ರೆಸ್ – 29,18,360 ರೂ.
ಉಪೇಂದ್ರ ಪೈ, ಶಿರಸಿ, ಜೆಡಿಎಸ್ – 5,09,050 ರೂ.
ಶಿವರಾಮ ಹೆಬ್ಬಾರ್, ಯಲ್ಲಾಪುರ, ಬಿಜೆಪಿ – 38,16,363 ರೂ.
ವಿ.ಎಸ್.ಪಾಟೀಲ್, ಯಲ್ಲಾಪುರ, ಕಾಂಗ್ರೆಸ್ – 18, 61,276 ರೂ.
ನಾಗೇಶ ನಾಯ್ಕ, ಯಲ್ಲಾಪುರ, ಜೆಡಿಎಸ್ – 8,95,016 ರೂ.
Web Stories