ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮೇ 12ರ ಶನಿವಾರ ಏಕಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 4.96 ಕೋಟಿ ಮತದಾರರಿದ್ದು, ಈ ಬಾರಿಯ ಚುನಾವಣೆಗೆ ಚುನಾವಣಾ ಆಯೋಗ ಸಾಕಷ್ಟು ವಿಶೇಷತೆಗಳನ್ನು ಸಿದ್ಧಗೊಳಿಸಿದೆ.
Advertisement
Advertisement
1.ವಿವಿಪ್ಯಾಟ್ ಬಳಕೆ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ವೇಳೆ ವಿವಿಪ್ಯಾಟ್ ಬಳಕೆ ಮಾಡುವ ಕುರಿತು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ವಿದ್ಯುನ್ಮಾನ ಮತಯಂತ್ರಗಳ ಬಗೆಗಿನ ಸಂದೇಹ ನಿವಾರಿಸುವ ಸಲುವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಗಳನ್ನು 56,696 ಮತಗಟ್ಟೆಗಳಲ್ಲಿ ಅಳವಡಿಸಲಾಗುತ್ತಿದೆ. ಅಲ್ಲದೇ ಚುನಾವಣಾ ಫಲಿತಾಂಶದ ಎಣಿಕೆ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯ ಮತಗಳನ್ನು ಪರಿಶೀಲಿಸಿ ತಾಳೆ ನೋಡಲಾಗುತ್ತದೆ.
Advertisement
2.ಸಂಪೂರ್ಣ ಮಹಿಳೆಯರಿಂದ ನಿರ್ವಹಣೆ: ವಿಶೇಷವಾಗಿ ಈ ಬಾರಿಯ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರದ ಒಂದು ಮತಕೇಂದ್ರವನ್ನು ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ಈ ಮತಕೇಂದ್ರಕ್ಕೆ ಮಹಿಳಾ ಸಿಬ್ಬಂದಿ ಜೊತೆ ಮಹಿಳಾ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ.
Advertisement
3.ಬೂತ್ ಮಟ್ಟದ ಯೋಜನೆ: ದೇಶದಲ್ಲೇ ಮೊದಲ ಬಾರಿಗೆ ಚುನಾವಣಾ ಆಯೋಗ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬುತ್ ಮಟ್ಟದ ಯೋಜನೆಯನ್ನು ರೂಪಿಸಿ ಜಾರಿಗೆ ತರುತ್ತಿದೆ. ರಾಜ್ಯದ 56,696 ಬೂತ್‍ಗಳಲ್ಲಿಯೂ ಯೋಜನೆ ಜಾರಿಗೆ ಅಗತ್ಯ ಕ್ರಮ ರೂಪಿಸಲಾಗಿದೆ.
ಪ್ರತಿ ಮತಗಟ್ಟೆಯ ಮಾಹಿತಿಯನ್ನು ಉನ್ನತ ಮಟ್ಟದ ಕಾರ್ಯಾಚರಣೆ ವಿಧಾನ(ಎಸ್‍ಓಪಿ)ವನ್ನು ಆಧರಿಸಿ ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತದೆ. ಚುನಾವಣಾ ಪ್ರಕ್ರಿಯೆ ಸುಲಭವಾಗಿ ನಡೆಯಲು ಈ ಕ್ರಮವನ್ನು ಅನುಸರಿಸಲಾಗುತ್ತಿದೆ. ಬೂತ್ ಮಟ್ಟದ ಮಾಹಿತಿ ಎಸಿ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ವಿಂಗಡನೆ ಮಾಡಿ ಚುನಾವಣಾ ಸಿದ್ಧತೆ ನಡೆಯಲಿದೆ.
4.ಇ-ಅಟ್ಲಾಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧತೆಯ ಪ್ರತಿ ಹಂತದ ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ಚುನಾವಣಾ ಆಯೋಗ ಜಿಯೋಗ್ರಾಫಿಕ್ ಇನ್ಫಾರ್ಮೆಶನ್ ಸಿಸ್ಟಂ (ಜಿಐಎಸ್)ಬಳಸಲಿದೆ.
5.ಇ-ಪೇಮೆಂಟ್: ಈ ಬಾರಿಯ ಚುನಾವಣಾ ಆಯೋಗ ಖರ್ಚು ಮಾಡುವ ಪ್ರತಿ ಹಣವನ್ನು ಇ ಪೇಮೆಂಟ್ ಮೂಲಕ ಪಾವತಿ ಮಾಡಲಿದೆ. 1) ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪೊಲೀಸ್ ಹಾಗೂ ರಕ್ಷಣಾ ಅಧಿಕಾರಿಗಳಿಗೆ ನೀಡುವ ಭತ್ಯೆ. 2) ಚುನಾವಣಾ ಪ್ರಕ್ರಿಯೆಯಲ್ಲಿ ಬಳಕೆ ಮಾಡುವ ವಾಹನಗಳ ಬಾಡಿಗೆ ಹಾಗೂ ಸಿಬ್ಬಂದಿ ವ್ಯವಸ್ಥೆ. 3) ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆಗೆ ಬಳಕೆ ಮಾಡಲಾಗುವ ಎಲ್ಲಾ ಸರಕು ಮತ್ತು ಸೇವೆಗಳನ್ನು ನೀಡುವವರಿಗೆ ಇ ಪೇಮೆಂಟ್ ಮೂಲಕವೇ ಹಣವನ್ನು ಪಾವತಿ ಮಾಡಲಿದೆ.
6.ಎಲೆಕ್ಟ್ರಾನಿಕ್ ಅಂಚೆ ಮತದಾನ: ಈ ಹಿಂದೆ ಪಂಜಾಬ್, ಉತ್ತರಪ್ರದೇಶ, ಉತ್ತರಖಂಡ ಮತ್ತು ಮಣಿಪುರ ಚುನಾವಣೆಗಳಲ್ಲಿ ಬಳಕೆ ಮಾಡಲಾಗಿದ್ದ ಎಲೆಕ್ಟ್ರಾನಿಕ್ ಟ್ರಾನ್ರ್ಸ್‍ಮಿಟೆಡ್ ಪೋಸ್ಟಲ್ ಅಂಚೆ ಮತದಾನ (ಇಟಿಪಿಬಿಎಸ್) ವಿಧಾನವನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಬಳಸಲು ಮುಂದಾಗಿದೆ. 2017-18 ಸಾಲಿನಲ್ಲಿ ನಡೆದ ಎಲ್ಲಾ ಚುನಾವಣೆಗಳ ಸಂದರ್ಭದಲ್ಲೂ ಬಳಕೆ ಮಾಡಲಾಗಿತ್ತು.
7.ವಿಕಲಚೇತನ ಸ್ನೇಹಿ ಮತಗಟ್ಟೆ: ಮತದಾನದಲ್ಲಿ ವಿಕಲಚೇತನರ ಭಾಗವಹಿಸುವಿಕೆ ಹೆಚ್ಚಿಸುವ ದೃಷ್ಟಿಯಿಂದ ವಿಕಲಚೇತನರಿಗಾಗಿ ವಿಶೇಷ ಸೌಕರ್ಯವನ್ನು ಒದಗಿಸುವುದಾಗಿ ಆಯೋಗ ಹೇಳಿದೆ.
ಏನಿದು ವಿವಿ ಪ್ಯಾಟ್?
ಮತದಾನದ ವೇಳೆ ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಪ್ರಿಂಟ್ ಆದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು.