ಬೆಂಗಳೂರು: ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮತದಾರ ಪಟ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಎಂದು ಹೆಸರಿದೆ. ಆದರೆ ನಾಮಪತ್ರ ಪ್ರಮಾಣ ಪತ್ರದಲ್ಲಿ ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸಿಲ್ಲ. ಬದಲಿಗೆ ನಿಖಿಲ್.ಕೆ ಎಂಬ ಹೆಸರಿನಲ್ಲಿ ನಾಮಪತ್ರವನ್ನು ಸಲ್ಲಿಸಲಾಗಿದೆ. ಇದು ಚುನಾವಣಾ ನೀತಿಯ ಉಲ್ಲಂಘನೆಯಾಗಿದೆ ಎಂದು ಬಿ.ಎಸ್ ಗೌಡ ಹೇಳಿದ್ದಾರೆ.
Advertisement
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರು ಮತ್ತು ಮತದಾರರ ಪಟ್ಟಿಯಲ್ಲಿರುವ ಹೆಸರು ಒಂದೇ ಆಗಿರಬೇಕು. ಇದು ಚುನಾವಣೆಯ ನೀತಿಯಾಗಿದೆ. ಆದರೆ ಈಗ ಹೆಸರುಗಳಲ್ಲಿ ವ್ಯತ್ಯಾಸ ಇರುವುದರಿಂದ ನಾಮಪತ್ರ ತಿರಸ್ಕ್ರತವಾಗಬೇಕಿತ್ತು. ಆದರೆ ಚುನಾವಣಾಧಿಕಾರಿ ಇದನ್ನು ಅಂಗೀಕರಿಸುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಬಿ.ಎಸ್ ಗೌಡ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ನಾಮಪತ್ರ ತಿರಸ್ಕರಿಸುವಂತೆ ಹಾಗೂ ಚುನಾವಣಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಬಿ.ಎಸ್ ಗೌಡ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ದೂರಿನಲ್ಲಿ ಏನಿದೆ?
ಮಂಡ್ಯ ಲೋಕಸಭಾ ಅಭ್ಯರ್ಥಿ ನಿಖಿಲ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಮತ್ತು ಅವರು ನೀಡಿರುವ ಪ್ರಮಾಣ ಪತ್ರದಲ್ಲಿನ ಹೆಸರು ಹೊಂದಣಿಕೆ ಇರದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಬೇಕು. ಮತದಾರರ ಪಟ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಎಂಬುದಾಗಿ ಇದೆ. ಆದರೆ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಿಖಿಲ್.ಕೆ ಎಂದು ನಮೂದಿಸಲಾಗಿದೆ. ಹೀಗಾಗಿ ಅವರು ನಿಖಿಲ್ ಕುಮಾರಸ್ವಾಮಿ ಎಂದು ಸುಳ್ಳು ಹೇಳಿರುತ್ತಾರೆ. ಮತದಾರರ ಪಟ್ಟಿಯಲ್ಲಿದ್ದ ಹೆಸರನ್ನು ಪ್ರಮಾಣ ಪತ್ರದಲ್ಲಿ ಮರೆಮಾಚಿರುತ್ತಾರೆ. ಹೀಗಾಗಿ ಇವರನ್ನು ಚುನಾವಣೆ ಉಮೇದುವಾರಿಕೆಯಿಂದ ವಜಾ ಮಾಡಬೇಕೆಂದು ಆಗ್ರಹಿಸುತ್ತೇನೆ.
Advertisement
ಜೊತೆಗೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳ ಮೇಲೆ ಅನೇಕ ದೂರುಗಳು ಬಂದರೂ ಅವರನ್ನು ವರ್ಗಾವಣೆ ಮಾಡದೇ ಉಳಿಸಿಕೊಂಡಿರುವುದು ಬಹಳ ಅನುಮಾನ ಬಂದಿದೆ. ಚುನಾವಣಾ ಸಂದರ್ಭದಲ್ಲಿ ಅಧಿಕಾರಿ ಮೇಲೆ ದೂರು ಬಂದರೆ ಅವರನ್ನು ತಕ್ಷಣವೇ ವರ್ಗಾವಣೆ ಮಾಡುವುದು ವಾಡಿಕೆ. ಆದರೆ ಅವರ ಮೇಲೆ ಸಾಕಷ್ಟು ದೂರುಗಳು ಬಂದರೂ ವರ್ಗಾವಣೆ ಮಾಡದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಹೀಗಾಗಿ ಅವರನ್ನು ವರ್ಗಾವಣೆ ಮಾಡುವ ಮೂಲಕ ಚುನಾವಣೆ ಸಂಸ್ಥೆಯ ಮೇಲೆ ಸಾರ್ವಜನಿಕರ ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.