ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಅನುಮಾನಸ್ಪದವಾಗಿ ರವಾನೆ ಮಾಡಿದ್ದ ಟ್ರಂಕ್ ನಲ್ಲಿ ಹಣ ಸಾಗಣೆ ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯ ಹೆಲಿಕಾಪ್ಟರ್ ನಲ್ಲಿ ಹಣ ಸಾಗಿಸಿದ್ದಾರೆಂಬ ಆರೋಪ ವಿಚಾರ ಯಾವುದೇ ಮಾಹಿತಿ ಬಂದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.
ಇತ್ತ ಕೋಲಾರದ ಸಮಾವೇಶದಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಅವರು, ಮೋದಿ ಅವರ ಹೆಲಿಕಾಪ್ಟರ್ ನಲ್ಲಿ ತಂದಿದ್ದ ಟ್ರಂಕ್ ನಲ್ಲಿ ಹಣವಿತ್ತು. ಮೋದಿ ಅವರಿಂದಲೇ ಹಣಸಾಗಣೆ ನಡೆಯುತ್ತಿದೆ. ಹಣ ಸಾಗಾಟ ಮಾಡುವುದು, ಶಾಸಕರನ್ನು ಕೊಂಡುಕೊಳ್ಳುವುದು ಅವರ ವೃತ್ತಿಯಾಗಿದೆ. ಎಲ್ಲರಿಗೂ ಒಂದೇ ನ್ಯಾಯ ಮಾಡಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ ಅವರು, ಚುನಾವಣೆಯ ಸಂದರ್ಭದಲ್ಲಿ ಎಲ್ಲರನ್ನು ತಪಾಸಣೆ ಮಾಡುವ ಚುನಾವಣಾ ಅಧಿಕಾರಿಗಳು ಮೋದಿಯನ್ನು ಯಾಕೆ ಬಿಟ್ಟಿದ್ದು? ಈ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದರು.
ತಮ್ಮ ಪ್ರಚಾರ ಭಾಷಣದಲ್ಲಿ ಮೋದಿ ಅವರು ಇಲ್ಲಿಯವರೆಗೂ ತಾವು ಮುಂದಿನ ಅವಧಿಯಲ್ಲಿ ಏನು ಮಾಡುತ್ತಾರೆ ಎಂಬುವುದನ್ನು ಹೇಳುತ್ತಿಲ್ಲ. 5 ವರ್ಷದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಪ್ರಸ್ತಾಪ ಮಾಡಿಲ್ಲ. ಆದರೆ ರಾಹುಲ್ ಗಾಂಧಿ ಅವರು ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಪಷ್ಟ ಚಿತ್ರಣಗಳನ್ನು ನೀಡಿದ್ದಾರೆ. ಯುವಕರು, ರೈತರ ಸಮಸ್ಯೆಗಳನ್ನು ಬಗೆಹರಿಸುವ ಚಿಂತನೆ ಮಾಡಿದ್ದಾರೆ. ಈ ಬಾರಿ ಯೋಚನೆ ಮಾಡಿ ಮತ ಚಲಾಯಿಸಿ ಎಂದು ಸಿದ್ದರಾಮಯ್ಯ ಅವರು ಕರೆ ನೀಡಿದರು.