ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಕೊನೆ ಕ್ಷಣದಲ್ಲಿ ಯೂಟರ್ನ್ ಮಾಡುತ್ತಾರೆ ಅನ್ನೋ ವಿಪಕ್ಷಗಳ ಆರೋಪಕ್ಕೆ ಕೊನೆಗೂ ಉತ್ತರ ಸಿಕ್ಕಾಗಿದೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಸ್ಥಳೀಯರಿಗೆ ಅವಕಾಶ ಕೊಡಿ, ಸ್ವಾಭಿಮಾನಿ ಎಂಬ ಅಸ್ತ್ರವನ್ನು ಸಿದ್ದರಾಮಯ್ಯ ವಿರುದ್ಧ ಪ್ರಯೋಗ ಮಾಡುತ್ತಿದ್ದಾರೆ.
Advertisement
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ (Kolar Constituency) ದಿಂದ ಸ್ಪರ್ಧೆ ಮಾಡುವ ಬಗ್ಗೆ ಸಾಕಷ್ಟು ಅನುಮಾನಗಳು, ಗೊಂದಲಗಳು ಕ್ಷೇತ್ರದ ಜನರಲ್ಲಿ ಕಾಡುತ್ತಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಸಹ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರಕ್ಕೆ ಬರುವುದಿಲ್ಲ. ಕೊನೆ ಕ್ಷಣದಲ್ಲಿ ಯೂಟರ್ನ್ ಹೊಡೆದು ವರುಣಾ ಕ್ಷೇತ್ರಕ್ಕೆ ಹೋಗಲಿದ್ದಾರೆ ಎಂದು ಅಪಪ್ರಚಾರ ಮಾಡ್ತಿದ್ರು. ಆದರೆ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ವಾರ್ ರೂಮ್ ಆರಂಭ ಮಾಡುವ ಜೊತೆಗೆ ಕೋಲಾರದಿಂದ ಸ್ಪರ್ಧೆ ಮಾಡುವುದು ನೂರಕ್ಕೆ ನೂರಷ್ಟು ಸತ್ಯವೆಂದು ಸ್ಪಷ್ಟವಾದ ಸಂದೇಶವನ್ನು ಕ್ಷೇತ್ರದ ಜನರ ಮುಂದೆ ಸಾರಿ ಸಾರಿ ಹೇಳಿದ ಮೇಲೆ ವಿರೋಧ ಪಕ್ಷಗಳಾದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷಗಳು ತಮ್ಮ ವರಸೆಯನ್ನು ಬದಲಾಯಿಸಿವೆ.
Advertisement
Advertisement
ಸಿದ್ದರಾಮಯ್ಯ ಹೊರಗಿನವರು ಅವರು ಗೆದ್ದರೆ ಯಾರ ಕೈಗೂ ಸಿಗುವುದಿಲ್ಲ. ಇಲ್ಲಿ ಸ್ಥಳೀಯರಿಗೆ ಈ ಬಾರಿ ಅವಕಾಶ ಮಾಡಿಕೊಡಿ ಎಂಬ ಅಸ್ತ್ರವನ್ನು ಸಿದ್ದರಾಮಯ್ಯ ಮೇಲೆ ಪ್ರಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಗೆದ್ದು ಮತ್ತೆ ಸಿಎಂ ಆದರೆ ಕ್ಷೇತ್ರದ ಜನತೆ ಅವರನ್ನು ನೋಡಲು ಸಹ ಸಾಧ್ಯವಾಗುವುದಿಲ್ಲ. ಬಾದಾಮಿಯಲ್ಲಿ ಆದ ಪರಿಸ್ಥಿತಿ ಕೋಲಾರಕ್ಕೂ ಬರಲಿದೆ ಎಂದು ವಿರೋಧ ಪಕ್ಷಗಳು ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಕೇಸ್ – CBIನಿಂದ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್
Advertisement
ಕೋಲಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸ್ಥಳೀಯರಾಗಿದ್ದು, ಕೋಲಾರದ ಜನತೆ ಸ್ವಾಭಿಮಾನಿಗಳಾಗಿದ್ದಾರೆ. ಯಾವುದೇ ಕಾರಣಕ್ಕೂ ಹೊರಗಡೆಯಿಂದ ಬಂದ ವ್ಯಕ್ತಿಗಳಿಗೆ ಈ ಬಾರಿ ಮಣೆ ಹಾಕುವುದಿಲ್ಲ. ಈಗಾಗಲೇ ಹೊರಗಡೆಯಿಂದ ಬಂದವರು ಏನು ಮಾಡಿದ್ದರೆ ಎಂಬುದು ಜನತೆಗೆ ಗೊತ್ತಿದೆ ಎಂದು ವಿರೋಧ ಪಕ್ಷಗಳ ಮುಖಂಡರು ಹೇಳುತ್ತಾರೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರೂ ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಿಲ್ಲ, ಅವರು ರಾಜ್ಯದ 224 ಕ್ಷೇತ್ರಗಳಲ್ಲಿ ಓಡಾಡಬೇಕಾಗಿದೆ. ಹಾಗಾಗಿ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಥರ್ಡ್ ಪ್ಲೇಸ್ ನಲ್ಲಿ ಇರುತ್ತದೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ಅವರು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಬರುವುದಿಲ್ಲವೆಂದು ಇಷ್ಟು ದಿನ ಅಪಪ್ರಚಾರ ಮಾಡುತ್ತಿದ್ದವರಿಗೆ ಇದೀಗ ಕೋಲಾರಕ್ಕೆ ಬರುವುದು ಖಚಿತವಾಗುತ್ತಿದ್ದಂತೆ ಸ್ಥಳೀಯರಲ್ಲವೆಂಬ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಅವರಿಗೆ ಇದು ಬಿಟ್ಟರೆ ಬೇರೇನು ಸಿಗುತ್ತಿಲ್ಲವೆಂದು ಕಾಂಗ್ರೆಸ್ ಪಕ್ಷದ ಎಂಎಲ್‍ಸಿ ಅನಿಲ್ ಕುಮಾರ್ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿರುವ ಕೋಲಾರ ಕ್ಷೇತ್ರದಲ್ಲಿ ದಿನೇದಿನೇ ಚುನಾವಣೆ ರಂಗೇರುತ್ತಿದ್ದು, ಮುಂದಿನ ದಿನಗಳಲ್ಲಿ ಮೂರು ಪಕ್ಷಗಳ ಭರಾಟೆ ಮತ್ತಷ್ಟು ಜೋರಾಗುವ ಜೊತೆಗೆ ಕೋಲಾರ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿ ಹಾಟ್ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.