ಬೆಂಗಳೂರು: ಚುನಾವಣೆ ಸಮಯದಲ್ಲೇ ತನ್ನನ್ನು ರಾಜ್ಯ ಬಿಜೆಪಿ ಸೈಡ್‍ಲೈನ್ ಮಾಡಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ(Yediyurappa) ಈಗ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಸುದ್ದಿಗೆ ಪೂರಕ ಎಂಬಂತೆ ಇತ್ತೀಚಿಗೆ ಪಕ್ಷದ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಬಿಎಸ್‌ವೈ ಭಾಗಿಯಾಗುತ್ತಿಲ್ಲ. ಸಿಎಂ ಬೊಮ್ಮಾಯಿ(CM Basavaraj Bommai) ಜೊತೆಗೂ ಬಿಎಸ್‍ವೈ ಸಂಬಂಧ ಚೆನ್ನಾಗಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಇದೇ ಹೊತ್ತಲ್ಲಿಯೇ, ಪಕ್ಷದಲ್ಲಿ ಭಿನ್ನಮತ ಇರುವುದು ನಿಜ ಎಂದಿರುವ ಮಾಜಿ ಮಂತ್ರಿ ಈಶ್ವರಪ್ಪ, ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಇದನ್ನು ಸರಿಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೈಕಮಾಂಡ್ ಕ್ಲಾಸ್:
ಕೊಪ್ಪಳದಲ್ಲಿ(Koppala) ಗುರುವಾರ ನಡೆಯಲಿರುವ ಪಕ್ಷದ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಯಡಿಯೂರಪ್ಪಗೆ ಆಹ್ವಾನ ನೀಡದ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಪಕ್ಷದ ನಾಯಕರಿಗೆ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದೆ. ಹೈಕಮಾಂಡ್ ತಪರಾಕಿ ಕೊಟ್ಟ ಹಿನ್ನೆಲೆಯಲ್ಲಿ ಮತ್ತು ಅಷ್ಟರಲ್ಲಾಗಲೇ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿದ್ದರಿಂದ ಕಡೆಯ ಕ್ಷಣದಲ್ಲಿ ಎಚ್ಚೆತ್ತು ಬಿಜೆಪಿಯಿಂದ ಮಾಜಿ ಸಿಎಂ ಬಿಎಸ್‌ವೈಗೆ ಇವತ್ತು ಮಧ್ಯಾಹ್ನ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ಕೋಮುವಾದಿ ಪಕ್ಷ ಮಣಿಸಲು ಕಾಂಗ್ರೆಸ್ ಸೇರಲು ನಿರ್ಧಾರ – ವೈಎಸ್‌ವಿ ದತ್ತ
ಪರಿಷತ್ ಸದಸ್ಯ ಎನ್ ರವಿಕುಮಾರ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ತೆರಳಿ ಮನವೊಲಿಕೆ ಕಸರತ್ತು ನಡೆಸಿದರು. ಜೊತೆಗೆ ಯಡಿಯೂರಪ್ಪಗೆ ಹೈಕಮಾಂಡ್‌ನಿಂದಲೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂದೇಶ ಕಳಿಸಲಾಯ್ತು. ಜೆಪಿ ನಡ್ಡಾ ಭಾಗವಹಿಸಲಿರುವ ನೂತನ ಹತ್ತು ಜಿಲ್ಲಾ ಬಿಜೆಪಿ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭಾಗವಹಿಸಲು ನಿರ್ಧರಿಸಿದ್ದಾರೆ. ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಯಡಿಯೂರಪ್ಪ ಕೊಪ್ಪಳಕ್ಕೆ ತೆರಳಲಿದ್ದಾರೆ. ಬಿಎಸ್ವೈಗೆ ಎಂಎಲ್‌ಸಿ ರವಿಕುಮಾರ್ ಸಾಥ್ ಕೊಡಲಿದ್ದಾರೆ.
ಈ ಮೊದಲು ಗದಗ್ ನಲ್ಲಿ ಜಿಲ್ಲಾ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಮುಖರಾಗಿ ಭಾಗವಹಿಸುವಂತೆ ಯಡಿಯೂರಪ್ಪ ಅವರನ್ನು ಪಕ್ಷ ನಿಯೋಜಿಸಿತ್ತು.
ಈ ಬಗ್ಗೆಪ್ರತಿಕ್ರಿಯಿಸಿದ ರವಿಕುಮಾರ್, ಕಡೆಗಣನೆ ಮಾಡುವಂತಹದ್ದು ಏನು ಇಲ್ಲ ಅಥರದ್ದು ಏನು ಇಲ್ಲ. ದಿನಾಂಕ ಕೊನೆ ಕ್ಷಣದಲ್ಲಿ ನಿಗದಿಯಾದ ಕಾರಣ ಯಡಿಯೂರಪ್ಪನವರಿಗೆ ತಿಳಿಸುವಲ್ಲಿ ತಡವಾಗಿದೆ. ಯಡಿಯೂರಪ್ಪ ಅವರನ್ನ ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ. ಅನಾನುಭವಿ ಕಾರ್ಯಕರ್ತರ ಎಡವಟ್ಟಿನಿಂದ ಈ ರೀತಿ ಆಗಿದೆ. ಅವರನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಬರುವ ದಿನಾಂಕದ ಬಗ್ಗೆ ಗೊಂದಲ ಇತ್ತು. ಯಡಿಯೂರಪ್ಪ ಅವರಿಗೆ ಗದಗ ಅಂತಾ ನಿಶ್ಚಯ ಆಗಿತ್ತು. ಗದಗ ಬೇಡ ನೀವು ಕೊಪ್ಪಳಕ್ಕೆ ಬರಬೇಕು ಎಂದು ಕೇಳಿಕೊಂಡಿದ್ದೇವೆ. ಯಡಿಯೂರಪ್ಪನವರು ಬರುವುದಕ್ಕೆ ಒಪ್ಪಿಕೊಂಡಿದ್ದು ನಾನು ಅವರ ಜೊತೆಯಲ್ಲೇ ತೆರಳುತ್ತೇನೆ. ಮೊದಲೇ ತಿಳಿಸದೇ ಇರುವುದು ತಪ್ಪಾಗಿದೆ ಎಂದು ರವಿಕುಮಾರ್ ಹೇಳಿದರು.