ಅನೇಕಲ್: ಕಜ್ಜಾಯ ಕೊಡುವ ನೆಪದಲ್ಲಿ ಮನೆಗೆ ಕರೆದು ವೃದ್ಧೆಯನ್ನು ಕೊಲೆ ಮಾಡಿ ಮಹಿಳೆ ಚಿನ್ನಾಭರಣ ದೋಚಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಮೃತದೇಹವನ್ನು ಕೆರೆಗೆ ಎಸೆದು ಪರಾರಿಯಾಗಿದ್ದಳು.
ದೀಪಾವಳಿ ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ ಎಂದು ಅಜ್ಜಿಯೊಬ್ಬರನ್ನು ಕರೆದ ಅದೇ ಊರಿನ ಮಹಿಳೆ, ಅಜ್ಜಿ ಬಳಿ ಇರುವ ಚಿನ್ನಕ್ಕಾಗಿ ಆಕೆಯನ್ನೇ ಕೊಂದು ಕೆರೆಗೆ ಎಸೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಬಳಿ ನಡೆದಿದೆ. 68 ವರ್ಷದ ಭದ್ರಮ್ಮ ಮೃತ ದುರ್ದೈವಿ. ದೀಪ ಕೊಲೆ ಮಾಡಿರುವ ಚಾಲಾಕಿ ಕಿಲ್ಲರ್ ಲೇಡಿ ಆಗಿದ್ದಾಳೆ.
ಅ.30 ರಂದು ಭದ್ರಮ್ಮ ಕಾಣೆಯಾಗಿದ್ದಾಳೆಂದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದಾಗ ದೀಪಾ ಮೇಲೆ ಅನುಮಾನ ಮೂಡಿತ್ತು. ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಕಹಾನಿ ಹೊರಬಂದಿದೆ.
ಅಜ್ಜಿಯನ್ನು ಕಜ್ಜಾಯ ನೀಡಲು ಮನೆಗೆ ಕರೆದ ದೀಪ ಅಜ್ಜಿಯ ಬಳಿ ಚಿನ್ನಾಭರಣ ದೋಚಲು ಕೊಲೆ ಮಾಡಿದ್ದಾಳೆ. ಆನಂತರ ಎರಡು ದಿನ ಶವವನ್ನು ಮನೆಯಲ್ಲೇ ಬಚ್ಚಿಟ್ಟಿದ್ದಳು. ಆದರೆ, ದುರ್ವಾಸನೆ ಬರುತ್ತಿದ್ದಂತೆ ದೊಡ್ಡತಿಮ್ಮಸಂದ್ರ ಕೆರೆಗೆ ಕಾರಿನಲ್ಲಿ ತೆಗೆದುಕೊಂಡು ಹೋಗಿ ಹೆಣವನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದಾಳೆ. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಸದ್ಯ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಗ್ರಾಮಾಂತರ ಅಡಿಷನಲ್ ಎಸ್‌ಪಿ ಮಾಹಿತಿ ನೀಡಿದ್ದಾರೆ.

