ಚಿಕ್ಕಬಳ್ಳಾಪುರ: ಮಕ್ಕಳ ನಿರ್ಲಕ್ಷ್ಯ ವರ್ತನೆಯಿಂದ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮದಲ್ಲಿ ನಡೆದಿದೆ.
ಮಾರೇಗೌಡ (62) ಗಂಗಮ್ಮ ( 55) ಮೃತರಾಗಿದ್ದಾರೆ. ಈ ವೃದ್ಧ ದಂಪತಿ ಕಳೆದ ಭಾನುವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಗ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಗೂಂಡಾಗಿರಿಯನ್ನು ನಾವು ಸಹಿಸುವುದಿಲ್ಲ: ಬಿ.ಕೆ.ಹರಿಪ್ರಸಾದ್
ಮೃತ ವೃದ್ದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ಹಾದ್ರಿಪುರ ಗ್ರಾಮದಲ್ಲಿ ಬೇರೆ ವಾಸವಾಗಿದ್ದರು. ಮಾರೇಗೌಡರು ವಿಶೇಷಚೇತನರಾಗಿದ್ದು, ಪತ್ನಿ ಗಂಗಮ್ಮ ಆರೈಕೆ ಮಾಡುತ್ತಿದ್ದರು. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂಬ ನೋವು ಕೊರಗು ಇಬ್ಬರನ್ನು ಕಾಡುತ್ತಿತ್ತಂತೆ. ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್
ಮೊದಲಿಂದಲೂ ಹಾದ್ರಿಪುರ ಗ್ರಾಮದಲ್ಲಿ ಕಿರಿಯ ಮಗನ ಜೊತೆ ಇಬ್ಬರು ವಾಸವಾಗಿದ್ದರು. ಆದರೆ ಇತ್ತೀಚೆಗೆ ಕಿರಿಯ ಮಗ ಸಹ ಅಪ್ಪ ಅಮ್ಮನನ್ನ ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದನಂತೆ. ಈ ವಿಚಾರಕ್ಕೆ ಮನನೊಂದು ವೃದ್ದ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.