ತೆಲಂಗಾಣ: ಪತ್ನಿಯಿಂದ ವಿಚ್ಛೇದನ ಬಯಸಿದ ವೈದ್ಯ ಪತಿಯೊಬ್ಬರು ಮೊಬೈಲ್ ಟವರ್ ಏರಿ ಕುಳಿತ ಘಟನೆ ತೆಲಂಗಾಣದ ಜಗ್ತಿಯಾಲ್‍ನಲ್ಲಿ ನಡೆದಿದೆ.
ಪತಿ ಅಜಯ್ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಇವರ ಪತ್ನಿ ಲಾಸ್ಯಾ ಅಜಯ್ ವಿರುದ್ಧ ಜಕ್ತಿಯಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ನೊಂದ ಅಜಯ್ ವಿಚ್ಛೇದನ ನೀಡುವಂತೆ ಮೊಬೈಲ್ ಟವರ್ ಏರಿ ಕುಳಿತಿದ್ದರು.
ನಡೆದುದ್ದೇನು?: ಅಜಯ್ ಮತ್ತು ಲಾಸ್ಯಾ ದಂಪತಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಒಂದು ಹೆಣ್ಣು ಮಗು ಸಹ ಇದೆ. ನಾಲ್ಕು ವರ್ಷಗಳ ಹಿಂದೆ ಲಾಸ್ಯಾ ಪತಿ ಮನೆಯವರಿಂದ ಕಿರುಕುಳದ ಆರೋಪ ಹೊರಿಸಿ ಜಗ್ತಿಯಾಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 498 ರ ಅಡಿ ದೂರು ದಾಖಲಿಸಿದ್ದರು. ಆಗ ಪೊಲೀಸರು ಅವರಿಬ್ಬರಿಗೂ ರಾಜಿ ಮಾಡಿಸಿದ್ದರು. ನಂತರ ದಂಪತಿ ಮತ್ತೆ ಒಟ್ಟಾಗಿ ಜೀವನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಹೆಂಡತಿ ಲಾಸ್ಯಾ ಎರಡನೇ ಬಾರಿ ಅಜಯ್ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ ಅಜಯ್ ಮೊಬೈಲ್ ಟವರ್ ಏರಿದ್ದು, ಕೆಳಗಿಳಿಯಲು ನಿರಾಕರಿಸಿದ್ದರು. ನನಗೆ ವಿಚ್ಛೇದನ ಬೇಕು ಎಂದು ಹೇಳಿದ್ದರು. ನಂತರ ಪೊಲೀಸರು ಅಜಯ್ ಅವರನ್ನ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.