ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಅಭ್ಯರ್ಥಿಗೆ ತಮ್ಮ ಬೇಷರತ್ ಬೆಂಬಲ ಇದೆ ಎಂದು ನಿಯೋಜಿತ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಪುನರುಚ್ಚರಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ತಮ್ಮ ಬೆಂಬಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಬಳಿಕ ವಿರಾಮ ತೆಗೆದುಕೊಳ್ಳಲು ಶಿಂಧೆ ಅವರು ಸತಾರಾ ಜಿಲ್ಲೆಯ ತಮ್ಮ ಹುಟ್ಟೂರಿಗೆ ಹೋಗಿದ್ದಾರೆ. ಸದ್ಯ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದು, ಆರಾಮಾಗಿದ್ದೇನೆಂದು ತಿಳಿಸಿದ್ದಾರೆ.
ನಾನು ಈಗ ಚೇತರಿಸಿಕೊಂಡಿದ್ದೇನೆ. ಬಿಡುವಿಲ್ಲದ ಚುನಾವಣಾ ಕೆಲಸಗಳ ನಂತರ ನಾನು ವಿಶ್ರಾಂತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. 2.5 ವರ್ಷಗಳು ಮುಖ್ಯಮಂತ್ರಿಯಾಗಿ ನಾನು ಯಾವುದೇ ರಜೆ ತೆಗೆದುಕೊಂಡಿಲ್ಲ. ಜನರು ನನ್ನನ್ನು ಇಲ್ಲಿ ಭೇಟಿಯಾಗುತ್ತಿದ್ದಾರೆ. ನಾನು ಈಗಾಗಲೇ ಪಕ್ಷದ ನಾಯಕತ್ವಕ್ಕೆ ನನ್ನ ಬೇಷರತ್ ಬೆಂಬಲವನ್ನು ನೀಡಿದ್ದೇನೆ. ಅವರ ನಿರ್ಧಾರವನ್ನು ಬೆಂಬಲಿಸುತ್ತೇನೆಂದು ಹೇಳಿದ್ದಾರೆ.
ಕಳೆದ 2.5 ವರ್ಷಗಳ ನಮ್ಮ ಸರ್ಕಾರದ ಕೆಲಸಗಳು ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಅದಕ್ಕಾಗಿಯೇ ಜನರು ನಮಗೆ ಐತಿಹಾಸಿಕ ಜನಾದೇಶವನ್ನು ನೀಡಿದರು. ವಿರೋಧ ಪಕ್ಷದ ನಾಯಕನ ಆಯ್ಕೆಗೂ ಅವರಿಗೆ ಅವಕಾಶ ಇಲ್ಲದಂತೆ ಮಾಡಿದ್ದಾರೆ. ಮಹಾಯುತಿಯ ಎಲ್ಲಾ ಮೂರು ಪಕ್ಷಗಳು ನಾಳೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ನ.23 ರಂದು ಪ್ರಕಟವಾದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಭರ್ಜರಿ ಜಯ ಸಾಧಿಸಿತು. ಆದರೆ ಮೈತ್ರಿಕೂಟವು ಇನ್ನೂ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
280 ಸದಸ್ಯ ಬಲದ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಿಜೆಪಿ 132 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದರ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದವು.