LatestChamarajanagarCoronaDistrictsKarnatakaMain Post

8 ಜಿಲ್ಲೆಗಳಲ್ಲಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನು PPP ಮಾದರಿಯಲ್ಲಿ ಸ್ಥಾಪಿಸಲು ಕ್ರಮ: ಬೊಮ್ಮಾಯಿ

ಚಾಮರಾಜನಗರ: ರಾಜ್ಯದ ಎಂಟು ಜಿಲ್ಲೆಗಳಿಗೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಒಂದೂವರೆ ವರ್ಷಗಳಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

CNG HOSPITAL 1

ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಚಾಮರಾಜನಗರ ಜಿಲ್ಲೆಯು ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ, ಹಿಂದುಳಿದ ಜಿಲ್ಲೆ ಎಂದು ಪರಿಗಣಿಸ್ಪಟ್ಟಿದೆ. ಜಿಲ್ಲೆ ದೇವಸ್ಥಾನಗಳ ತವರೂರು ಕೂಡ ಹೌದು. ನಮ್ಮ ಸರ್ಕಾರ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಪಣತೊಟ್ಟಿದೆ. ಶಿಕ್ಷಣ, ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ತಾರತಮ್ಯಗಳನ್ನು ಹೋಗಲಾಡಿಸಿ, ಉಳಿದ ಜಿಲ್ಲೆಗಳಂತೆ ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುವುದು ಎಂದರು.

BASAVARAJ BOMMAI 1

ಆರೋಗ್ಯ ಎನ್ನುವುದು ವ್ಯಕ್ತಿಗೆ ಬಹಳ ಮುಖ್ಯ. ಆದರೆ ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಯಾರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೋ ಅವರು ಬದುಕಿನಲ್ಲಿ ಸಾಧನೆಯನ್ನು ಮಾಡುತ್ತಾರೆ ಎಂದ ಮುಖ್ಯಮಂತ್ರಿಗಳು ಈ ಆಸ್ಪತ್ರೆ ಜಿಲ್ಲೆಯ ಆರೋಗ್ಯವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಲು ಸಶಕ್ತವಾದ ಆರೋಗ್ಯ ವ್ಯವಸ್ಥೆ ಮಾಡುವು ಕೇಂದ್ರಬಿಂದು ಆಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಮೌಢ್ಯಕ್ಕೆ ಹೆದರಿದ್ರಾ ಸಿಎಂ ಬೊಮ್ಮಾಯಿ?

CNG HOSPITAL

ಇಲ್ಲಿ ವಿದ್ಯೆ ಕಲಿಸುವ ಎಲ್ಲಾ ಪ್ರಾಧ್ಯಾಪಕರು, ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬೇಕು. ಇಲ್ಲಿ ಕಲಿತವರು ಅತ್ಯಂತ ಯಶಸ್ವಿ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ದಾದಿಯರಾಗಿ ಹೊರಹೊಮ್ಮಬೇಕು. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ತಲುಪಬೇಕು. ಅದಕ್ಕೆ ಸರ್ಕಾರ ಬದ್ಧವಾಗಿದ್ದು, ಆರೋಗ್ಯ ಮೂಲಸೌಕರ್ಯ ಹೆಚ್ಚಳವಾಗಬೇಕು. ವೈದ್ಯರಿಗೂ ಹಾಗೂ ರೋಗಿಯ ಅನುಪಾತದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗಿಂತಲೂ ರೋಗಿಗಳ ಮತ್ತು ಬೆಡ್ ಅನುಪಾತ ಕಡಿಮೆ ಇದೆ. ಇದನ್ನು ಸರಿದೂಗಿಸಲು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 154 ವೈದ್ಯಕೀಯ ಕಾಲೇಜುಗಳನ್ನು ಕೇವಲ 4 ವರ್ಷಗಳಲ್ಲಿ ಪ್ರಾರಂಭ ಮಾಡಿದ್ದಾರೆ. ರಾಜ್ಯದಲ್ಲಿ ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದರೆ ಶೇ 60 ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಬಹಳ ದೊಡ್ಡ ಪ್ರಮಾಣದ ಸಹಕಾರವನ್ನು ಕೊಟ್ಟಿದೆ ಎಂದರು.

CORONA VACCINE 1

ಕೇಂದ್ರ ಸರ್ಕಾರ ಕರೊನಾ ಉಚಿತ ಲಸಿಕೆಯನ್ನು ಪೂರೈಕೆಯಲ್ಲಿ ಸಹಕಾರ ನೀಡಿದೆ. ಈಗಾಗಲೇ ರಾಜ್ಯದ ಜನತೆಗೆ ಶೇ.80 ರಷ್ಟು ಮೊದಲನೇ ಡೋಸ್ ಹಾಗೂ ಶೇ. 30 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಡಿಸೆಂಬರ್ ತಿಂಗಳೊಳಗೆ ರಾಜ್ಯದ ಎಲ್ಲರಿಗೂ ಲಸಿಕೆಯನ್ನು ಪೂರೈಸುವ ಗುರಿ ಇದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ನಿರ್ಮಿಸಿ ಬಾಡಿಗೆ ಮನೆಯಲ್ಲಿದ್ದ ಉಮೇಶ್‍ಗೆ ಐಟಿ ಶಾಕ್

ಚಾಮರಾಜನಗರ ಜಿಲ್ಲೆಗೆ ಬಾರದೇ ಕರ್ತವ್ಯಲೋಪ ಎಸಗಲಾರೆ:
ಚಾಮರಾಜನಗರ ಜಿಲ್ಲೆ ರಾಜ್ಯದ ಅವಿಭಾಜ್ಯ ಅಂಗ. ಜಿಲ್ಲೆಗೆ ಬಂದು ಇಲ್ಲಿನ ಜನತೆಗೆ ಜನ ಕಲ್ಯಾಣ ಕಾರ್ಯಕ್ರಮ ನೀಡುವುದು ನಮ್ಮ ಆದ್ಯ ಕರ್ತವ್ಯ. ಈ ಜಿಲ್ಲೆಗೆ ಬಾರದೇ ಇದ್ದು ಕರ್ತವ್ಯಲೋಪ ಎಸಗಲಾರೆ ಎಂದ ಮುಖ್ಯಮಂತ್ರಿಗಳು ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದಾಗ ಪರಿಣಾಮವೂ ಒಳ್ಳೆಯದೇ ಇರುತ್ತದೆ ಈ ಸಂಕುಚಿತ ಭಾವನೆಯಿಂದ ಹೊರಬಂದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು. ವೈಜ್ಞಾನಿಕ ಹಾಗೂ ತರ್ಕಬದ್ಧವಾದ ಯುವಪೀಳಿಗೆ ನಿರ್ಮಾಣವಾಗಬೇಕು. ಅದಕ್ಕಿರುವ ಎಲ್ಲ ಅಡೆತಡೆಗಳನ್ನು ತೊಡೆದುಹಾಕಿ ಮುನ್ನುಗ್ಗಲು ಎಲ್ಲರ ಸಹಕಾರ ಬೇಕು. ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

Related Articles

Leave a Reply

Your email address will not be published. Required fields are marked *