ಮಡಿಕೇರಿ: ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. `ಕೊಡಗಿನ ವಿರೋಧಿ, ಕೊಡವರ ವಿರೋಧಿ ಸಿದ್ದರಾಮಯ್ಯ’ ಎಂಬಿತ್ಯಾದಿ ಘೋಷಣೆಗಳ ಮೂಲಕ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿನ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿದ್ದು ವಾತಾವರಣ ಉದ್ವಿಗ್ನಗೊಂಡಿದೆ. ಇದೇ ವೇಳೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ
ಸಿದ್ದರಾಮಯ್ಯ ಶಾಂತಿ ಪ್ರಿಯ ಕೊಡಗಿಗೆ ಬರೋದು ಬೇಡ, ಶಾಂತಿಪ್ರಿಯ ನಾಡಿನಲ್ಲಿ ಕೋಮುಗಲಭೆ ಬೆಳೆಸಿದ್ದಾರೆ. ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿದ್ದಾರೆ. 7 ವರ್ಷಗಳ ಹಿಂದೆ ಟಿಪ್ಪು ಜಯಂತಿಯನ್ನು ಬಲವಂತವಾಗಿ ಆಚರಿಸಿದ್ದರು. ಇದರಿಂದ ಜಿಲ್ಲೆಯಲ್ಲಿ ಎರಡು ಜನರ ಪ್ರಾಣ ಹೋದವು. ಅಂತಹವರು ಕೊಡಗಿಗೆ ಬರೋದು ಬೇಡ ಎಂದು ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಇಲ್ಲಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಮಾಡಿಕೊಂಡಿದ್ದಾರೆ.
ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರತಿಭಟಿಸಿದ್ದರು. ಇದನ್ನೂ ಓದಿ: ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ
ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದ್ದರು.
ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.