ಉಡುಪಿ: ಕರಾವಳಿಯ ಧಾರ್ಮಿಕ ಆಚರಣೆಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡ ಬರುತ್ತಿದೆ. ಅತ್ಯಂತ ಶೃದ್ಧೆ ಭಕ್ತಿಯಿಂದ ಆಚರಿಸುವ ನಾಗಮಂಡಲ ಸೇವೆಗೂ ಚುನಾವಣೆಯ ಬಿಸಿತಟ್ಟಿದೆ. ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಾಗಮಂಡಲ ನಡೆಯುತ್ತಿದ್ದಲ್ಲಿಗೆ ಬಂದ ಚುನಾವಣಾಧಿಕಾರಿಗಳು ರಾದ್ಧಾಂತ ಮಾಡಿದ್ದಾರೆ.
ಸಾಸ್ತಾನದ ಸ್ಥಳೀಯ ಕುಟುಂಬಸ್ಥರು ಅದ್ಧೂರಿಯಾಗಿ ನಾಗ ಮಂಡಲ ಸೇವೆ ಆಯೋಜನೆ ಮಾಡಿದ್ದರು. ಹತ್ತು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸೇರಿದ್ದರು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಧಾರ್ಮಿಕ ಕಾರ್ಯಕ್ರಮ ಆಯೋಜನೆಯಾಗಿತ್ತು. ಚುನಾವಣೆ ಘೋಷಣೆಯಾಗುವ ಮುನ್ನವೇ ಈ ನಾಗಮಂಡಲ ನಿಗದಿಯಾಗಿತ್ತು. ಯಾವುದೇ ಪೂರ್ವ ಸೂಚನೆ ನೀಡದೆ ಚುನಾವಣಾ ಅಧಿಕಾರಿಗಳ ನಾಗಮಂಡಲ ನಡೆಯುತ್ತಿದ್ದ ಪರಿಸರಕ್ಕೆ ಬಂದು ಪರವಾನಿಗೆ ಕೇಳಿದಾಗ ಗೊಂದಲದ ವಾತಾವರಣ ನಿರ್ಮಾಣವಾಯ್ತು.
ಚುನಾವಣಾ ನೀತಿ ಸಂಹಿತೆಯ ಹಿನ್ನೆಯಲ್ಲಿ ಎಲ್ಲಾ ಕಾರ್ಯಕ್ರಮಗಳುಗೂ ಹೊಸದಾಗಿ ಪರವಾನಿಗೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈ ಬಗ್ಗೆ ಮಾಹಿತಿ ಇರದ ನಾಗಮಂಡಲ ಆಯೋಜಕರು ಚುನಾವಣಾಧಿಕಾರಿಗಳ ಅನಿರೀಕ್ಷಿತ ಭೇಟಿಯಿಂದ ಕೆಲಕಾಲ ಕಕ್ಕಾಬಿಕ್ಕಿಯಾದರು. ನಾಗಮಂಡಲದಲ್ಲಿ ಇದ್ದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಿಗೂ ಚುನಾವಣಾ ಅಧಿಕಾರಿಗಳಿಗೂ ಮಾತಿನ ಚಕಮಕಿ ನಡೆಯಿತು. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆಕ್ಷೇಪಿಸಿದ ಜನರು ಯಾವುದೇ ಕಾರಣಕ್ಕೂ ಚಟುವಟಿಕೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೊನೆಗೆ ಆಯೋಜಕರು ಅಲ್ಲಿ ಅಳವಡಿಸಿದ್ದ ಬ್ಯಾನರ್, ಬಂಟಿಗ್ಸ್ ಗಳನ್ನು ತೆರವು ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ನಾಗಮಂಡಲ ಸೇವೆ ಮುಂದುವರಿಯಿತು.
ಕರಾವಳಿಯಲ್ಲಿ ಧಾರ್ಮಿಕ ಆಚರಣೆಗಳು ಈ ಸಂದರ್ಭ ಹೆಚ್ಚು ಹೆಚ್ಚು ನಡೆಯುತ್ತದೆ. ಕರಾವಳಿಯ ನಂಬಿಕೆ, ಆಚರಣೆಗಳ ಮೇಲೆ ದಾಳಿ ಮಾಡಲು ಬಂದ್ರೆ ಇಲ್ಲಿನ ಜನ ಸುಮ್ಮನಿರಲ್ಲ. ಚುನಾವಣೆಗಿಂತ ನಮಗೆ ನಮ್ಮ ಧಾರ್ಮಿಕ ನಂಬಿಕೆ ಹೆಚ್ಚು. ಚುನಾವಣೆ ಘೋಷಣೆಯಾಗುವ ಮೊದಲೇ ನಾಗಮಂಡಲ, ಯಕ್ಷಗಾನ, ಭೂತಾರಾಧನೆ ನಿಗದಿಯಾಗಿರುತ್ತದೆ. ಈ ಬಗ್ಗೆ ಜಿಲ್ಲಾಡಳಿತ ವಿನಾಯಿತಿ ಮಾಡದಿದ್ದರೆ ಜನ ಆಕ್ರೋಶಗೊಳ್ಳುತ್ತಾರೆ ಎಂದು ಜಾನಪದ ವಿದ್ವಾಂಸ ಅಲೆವೂರು ರಾಜೇಶ್ ಹೇಳಿದ್ದಾರೆ. ಚುನಾವಣಾ ಅಧಿಕಾರಿಗಳಿಗೂ ಈ ಬೆಳವಣಿಗೆ ತಲೆನೋವಾಗಿದೆ.