ಬೆಂಗಳೂರು: ವಿದ್ಯಾರ್ಥಿಯಿಂದ ಪಕ್ಕೆಲುಬು ಪದ ಪದೇ ಪದೇ ಹೇಳಿಸಿ ಅವಮಾನ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದ ಶಿಕ್ಷಕನಿಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಂದು ಸಚಿವರನ್ನು ಭೇಟಿಯಾಗಿ ಅಮಾನತು ವಾಪಸ್ ಪಡೆಯುವಂತೆ ಮನವಿ ಮಾಡಿದ್ದ ಶಿಕ್ಷಕರಿಗೆ ಚೆನ್ನಾಗಿ ಪಾಠ ಮಾಡಿ ‘ಪಕ್ಕೆಲುಬು’ ಮುರಿದಿದ್ದಾರೆ.
ಅಮಾನತು ಮಾಡಿದ ನಂತರ ಇವತ್ತು ಸ್ವತಃ ಸಚಿವರನ್ನು ಶಿಕ್ಷಕ ಭೇಟಿಯಾಗಿ ತನ್ನಿಂದ ತಪ್ಪಾಗಿದೆ. ಅಮಾನತು ವಾಪಸ್ ಪಡೆಯುವಂತೆ ಶಿಕ್ಷಕ ಕೇಳಿಕೊಂಡಿದ್ದಾರೆ. ಆದರೆ ಆ ಕ್ಷಮೆಯಲ್ಲಿ ಪಶ್ಚಾತ್ತಾಪ ಇರಲಿಲ್ಲ ಎನ್ನುವುದು ಸುರೇಶ್ ಕುಮಾರ್ ಅವರಿಗೆ ಗೊತ್ತಾಗುತ್ತಿದ್ದಂತೆ ಯಾವುದೇ ಕಾರಣಕ್ಕೂ ಅಮಾನತು ವಾಪಸ್ ಪಡೆಯುವುದಿಲ್ಲ ಅಂತ ಖಡಕ್ ಆಗಿ ಹೇಳಿ ಕಳಿಹಿಸಿದ್ದಾರೆ.
Advertisement
ತಮ್ಮ ಫೇಸ್ ಬುಕ್ ನಲ್ಲಿ ಘಟನೆ ವಿವರವನ್ನು ಸ್ವತಃ ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ. ಕೇವಲ ಅಮಾನತು ರದ್ದುಗೊಳಿಸಲು ಮಾತ್ರ ಕ್ಷಮೆ ಕೇಳಿದ್ದಕ್ಕೆ ಸುರೇಶ್ ಕುಮಾರ್ ಗರಂ ಆಗಿದ್ದಾರೆ.
Advertisement
Advertisement
ಸುರೇಶ್ ಕುಮಾರ್ ಪೋಸ್ಟ್ ನಲ್ಲಿ ಏನಿದೆ?
ಪಕ್ಕೆಲುಬು ವಿಡಿಯೋ ಖ್ಯಾತಿಯ ಶಿಕ್ಷಕರು ನನ್ನ ಬಳಿ ಬಂದಿದ್ದರು. ಅವರು ಆ ಮಗುವಿನ ಜೊತೆ ನಡೆಸಿರುವ ಆ ಕೃತ್ಯದ ಕುರಿತು ವಿಚಾರಿಸಿದಾಗ ಇನ್ನೂ ತಾನು ಮಾಡಿರುವುದು ತಪ್ಪು ಎಂದು ಅವರಿಗೆ ಅನಿಸಿಲ್ಲದಿರುವುದು ಸ್ಪಷ್ಟವಾಯಿತು.
Advertisement
ಕೇವಲ ತನ್ನ ಅಮಾನತನ್ನು ರದ್ದುಗೊಳಿಸುವ ಉದ್ದೇಶದಿಂದ ‘ತಪ್ಪಾಯಿತು’ ಎಂದು ಹೇಳಿದರೇ ಹೊರತು, ಅವರ ಮುಖದಲ್ಲಿ ಪಶ್ಚಾತ್ತಾಪದ ಲವಲೇಶವೂ ಇರಲಿಲ್ಲ. “ನಿಮ್ಮ ಜೊತೆ ಈಗ ಮಾತನಾಡಿರುವುದನ್ನು ಸೋಷಿಯಲ್‍ಮೀಡಿಯಾಗೆ ಬಿಡಲೇ” ಎಂದು ಕೇಳಿದಾಗ “ದಯವಿಟ್ಟು ಬೇಡ” ಎಂದ ಆ ಶಿಕ್ಷಕರು ಆ ಆತಂಕದಿಂದ ಕೂಡಿದ ಮಗುವಿನ ವಿಡಿಯೋ ಮಾಡಿಕೊಂಡದ್ದು ಏಕೆ? ಸೋಷಿಯಲ್ ಮೀಡಿಯಾಗೆ ಬಿಟ್ಟದ್ದು ಏಕೆ ಎಂದು ಕೇಳಿದರೆ ಕೊಟ್ಟ ಉತ್ತರ ಹಾಸ್ಯಾಸ್ಪದವಾಗಿತ್ತು.
ಆ ಮಗುವಿನ ಪೋಷಕರಿಗೆ ತೋರಿಸಲೆಂದು ವಿಡಿಯೋ ಮಾಡಿಕೊಂಡದ್ದೆಂದೂ ಮತ್ತು ತನ್ನ ಎಂಟು ವರ್ಷದ ಮಗ ಅದನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟದ್ದೆಂದೂ ಆ ಶಿಕ್ಷಕ ಹೇಳಿದಾಗ ನನ್ನ ತಿರಸ್ಕಾರ ಹೆಚ್ಚಾಯಿತು.
ಮೊದಲೇ ಸಿದ್ದಪಡಿಸಿಕೊಂಡು ಬಂದಿದ್ದ ಪತ್ರದಲ್ಲಿ ತನ್ನ ಮೇಲೆ ಬಂದಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವೆಂದೂ, ತನ್ನ ಅಮಾನತನ್ನು ವಾಪಸ್ಸುಪಡೆಯಬೇಕೆದೂ ಹೇಳುವ ವಿನಾ: ಒಂದು ಮಾತೂ ಸಹ ಆ ಮಗುವಿನ ಜೊತೆ ತಾನು ಮಾಡಿದ ಆ ಕೃತ್ಯದ ಬಗ್ಗೆ ಇರಲಿಲ್ಲ.
ಆ ಮಗುವಿನ ಬಳಿ ಕ್ಷಮೆ ಕೇಳಿ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡಲು ನೀವು ಸಿದ್ದರಿದ್ದೀರಾ ಎಂದು ಕೇಳಿದರೆ ಅವರ ಬಳಿ ಮಾತಿರಲಿಲ್ಲ. ನಾನು ಈಗ ಏನೂ ಹೇಳುವುದಿಲ್ಲ, ಒಂದೆರಡು ದಿನ ಕಳೆಯಲಿ ಎಂದು ಹೇಳಿ ಕಳಿಸಿದೆ. ಆಗಾದರೂ ಪಶ್ಚಾತ್ತಾಪ ಮೂಡಬಹುದೇ ನೋಡೋಣ.