ಬೆಂಗಳೂರು: ಶಿಕ್ಷಣದಲ್ಲಿ ಮತ್ತೊಮ್ಮೆ ಕಡ್ಡಾಯ ಮಾತೃ ಭಾಷಾ ಮಾಧ್ಯಮ ಜಾರಿಗೆ ತರುವ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮಹತ್ವದ ಚರ್ಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ನಾಂದಿ ಹಾಡಿದ್ದಾರೆ.
ರಾಜ್ಯ ಸರ್ಕಾರ ಕಾಲು ಶತಮಾನದಷ್ಟು ಹಿಂದೆ ತಂದಿದ್ದ ಮಹತ್ವದ ಆದೇಶವನ್ನು ಮತ್ತೊಮ್ಮೆ ಅನುಷ್ಠಾನಕ್ಕೆ ತರುತ್ತಾ ಅನ್ನುವ ಕುತೂಹಲಕ್ಕೆ ಸಚಿವ ಸಿ.ಟಿ ರವಿಯವರ ಹೇಳಿಕೆ ಇಂಬುಕೊಟ್ಟಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆಯಾ ಅನ್ನುವ ಅನುಮಾನವೂ ಹುಟ್ಟಿಕೊಂಡಿದೆ.
Advertisement
Advertisement
ಬೆಂಗಳೂರಿನಲ್ಲಿ ಈ ಬಗ್ಗೆ ಮಾತಾಡಿದ ಸಿ.ಟಿ ರವಿ, 2014 ರಲ್ಲಿ ಸುಪ್ರೀಂ ಕೋರ್ಟ್ ಮಾತೃಭಾಷಾ ಮಾಧ್ಯಮ ಕುರಿತು ಕೊಟ್ಟಿದ್ದ ತೀರ್ಪನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸುವ ಸುಳಿವು ಕೊಟ್ಟರು. ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸುವ ಅನಿವಾರ್ಯತೆಯಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಭಾಷಾ ಮಾಧ್ಯಮದ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟಿದ್ದು. ಇದರಲ್ಲಿ ಸರ್ಕಾರ ಬಲವಂತ ಮಾಡುವಂತಿಲ್ಲ ಎಂಬ ತೀರ್ಪು ಕೊಟ್ಟಿದೆ. ಈ ತೀರ್ಪು ಪ್ರಶ್ನಿಸಿ ಮತ್ತೆ ಸುಪ್ರೀಂ ಕೋರ್ಟ್ ಗೆ ಹೋಗುವ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸುವುದಾಗಿ ಸಚಿವ ಸಿ.ಟಿ ರವಿ ಹೇಳಿದರು. ಅಷ್ಟೇ ಅಲ್ಲ ಮಾತೃಭಾಷಾ ಮಾಧ್ಯಮ ಕುರಿತು ಬೇರೆ ರಾಜ್ಯಗಳ ಜೊತೆಗೂ ಮಾತುಕತೆ ನಡೆಸುವುದಾಗಿ ತಿಳಿಸಿದರು. ಸಚಿವ ಸಿ.ಟಿ ರವಿಯವರ ಈ ಹೇಳಿಕೆ ಮತ್ತೆ ಕನ್ನಡಪ್ರಿಯರ, ಸಾಹಿತಿಗಳ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಈ ಸಂಬಂಧ ಸರ್ಕಾರದ ಮುಂದಿನ ನಡೆಯನ್ನು ಎದುರು ನೋಡಬೇಕಾಗಿದೆ.
Advertisement
Advertisement
ಹಿನ್ನೆಲೆ:
ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ಕನ್ನಡ ಭಾಷೆ ಕಲಿಕೆಯ ಮಾಧ್ಯಮ ಆಗಬೇಕೆಂದು 1994 ರಲ್ಲಿ ರಾಜ್ಯ ಸರ್ಕಾರ ಮಹತ್ತರ ಆದೇಶ ಹೊರಡಿಸಿತ್ತು. 1994-95ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಮಾನ್ಯತೆ ಪಡೆದ ಎಲ್ಲಾ ಶಾಲೆಗಳಲ್ಲಿ ಮಾತೃಭಾಷೆ ಇಲ್ಲವೇ ಕನ್ನಡವೇ ಕಲಿಕೆಯ ಮಾಧ್ಯಮ ಆಗಿರತಕ್ಕದ್ದು. ಈ ಆದೇಶವನ್ನು ಪಾಲಿಸದ ಶಾಲೆಗಳು ಬಾಗಿಲು ಹಾಕತಕ್ಕದ್ದು ಎಂದು ರಾಜ್ಯ ಸರ್ಕಾರ 1994ರಲ್ಲಿ ಆದೇಶ ಹೊರಡಿಸಿತ್ತು.
ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಕಡ್ಡಾಯ ಮಾಡಿದ್ದ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯನ್ನು ಏಕೈಕ ಶಿಕ್ಷಣ ಮಾಧ್ಯಮವನ್ನಾಗಿ ಹೇರಲು ಬರುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತ್ತು. ಆ ಮೂಲಕ ಸರ್ಕಾರದ ಆದೇಶಕ್ಕೆ ತಡೆ ಬಿದ್ದಿತ್ತು.