ಬೆಂಗಳೂರು: ಈದ್ಗಾ ಮೈದಾನ ಉಳಿವಿಗಾಗಿ ಚಾಮರಾಜಪೇಟೆ ಬಂದ್ ಯಶಸ್ವಿಯಾದ ಬೆನ್ನಲ್ಲೇ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮುಂದಾಗಿದೆ.
ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತೆಂದು ಘೋಷಣೆ ಆಗುವ ತನಕ ಜಗ್ಗುವುದಿಲ್ಲ ಎಂದಿರುವ ಒಕ್ಕೂಟಗಳು ಸರ್ಕಾರದ ಮೇಲೆ ಹೇಗೆ ಒತ್ತಡ ಹೇರಬೇಕು ಎಂಬುದರ ಬಗ್ಗೆ ಇಂದು ಸಂಜೆ ಚಾಮರಾಜಪೇಟೆಯಲ್ಲಿ ಸಭೆ ಆಯೋಜಿಸಿದೆ. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ – ಚಾಮರಾಜಪೇಟೆ ಬಂದ್ ಯಶಸ್ವಿ
2-3 ದಿನದೊಳಗೆ ನೂರಾರು ಬೈಕ್ ಗಳ ಮೂಲಕ ರ್‍ಯಾಲಿ ಮಾಡುವ ಮೂಲಕ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆ ಮುತ್ತಿಗೆ ಹಾಕಲು ಚಿಂತನೆ ನಡೆದಿದೆ. ಮತ್ತೊಂದೆಡೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ ಮೋಹನ್ ಮೇಲೆ ಒತ್ತಡ ಹಾಕಿ ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿಗೆ ಅವಕಾಶ ಕೊಡಿಸುವಂತೆ ಒಕ್ಕೂಟ ಪಟ್ಟು ಹಿಡಿದಿದೆ.
ಹಲವು ವಿಷಯಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ತೀರ್ಮಾನ ತೆಗೆದುಕೊಳ್ಳಲಿದೆ.