ಚೆನ್ನೈ: 10 ದಿನಗಳ ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಿದೆ. ವಿ.ಕೆ.ಶಶಿಕಲಾ ಅವರ ನಿಷ್ಠಾವಂತ ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಗುರುವಾರ ಸಂಜೆ ಸಂಜೆ 4 ಗಂಟೆ ವೇಳೆಗೆ ರಾಜಭವನದಲ್ಲಿ 63 ವರ್ಷದ ಪಳನಿಸ್ವಾಮಿ ಅವರಿಗೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಪಳನಿಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು.
ಪಳನಿಸ್ವಾಮಿ ಸಂಪುಟಕ್ಕೆ 27 ಶಾಸಕರು ಸೇರ್ಪಡೆಯಾಗಿದ್ದಾರೆ. ಏಕಕಾಲದಲ್ಲಿ 8 ಜನ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಇನ್ನು ನಾಲ್ವರು ಮಹಿಳೆಯರು ಪಳನಿಸ್ವಾಮಿ ಸಂಪುಟ ಸೇರಿದ್ದು, 18 ಖಾತೆಗಳನ್ನು ಪಳನಿಸ್ವಾಮಿ ಅವರೇ ಉಳಿಸಿಕೊಂಡಿದ್ದಾರೆ.
ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಇ.ಕೆ.ಪಳನಿಸ್ವಾಮಿಯವರಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. 234 ಮಂದಿ ಸದಸ್ಯರುಳ್ಳ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 117 ಶಾಸಕರ ಬೆಂಬಲ ಬೇಕು. ಸದ್ಯ 134 ಮಂದಿ ಎಐಎಡಿಎಂಕೆ ಶಾಸಕರ ಪೈಕಿ 124 ಮಂದಿಯ ಬೆಂಬಲ ಪಳನಿ ಸ್ವಾಮಿಗೆ ಇದೆ.
ಶಶಿಕಲಾ ಬಣಕ್ಕೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಅವರು ಅವಕಾಶ ನೀಡಿದ್ದಕ್ಕೆ ಪನ್ನೀರ್ ಸೆಲ್ವಂ ಬಣದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.