ನವದೆಹಲಿ: ಭಾರತದಲ್ಲಿನ ಕೆಲ ಎನ್‌ಜಿಒ ಸಂಸ್ಥೆಗಳಿಗೆ ಅಮೆರಿಕದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್ (George Soros) ನೇತೃತ್ವದ ಆರ್ಥಿಕ ಅಭಿವೃದ್ಧಿ ನಿಧಿಯಿಂದ ಹಣಕಾಸಿನ ನೆರವು ನೀಡಿರುವುದು ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಬಹಿರಂಗವಾಗಿದೆ.
ಹೌದು. ಸೊರೊಸ್ ಆರ್ಥಿಕ ಅಭಿವೃದ್ಧಿ ನಿಧಿ (SEDF) ಭಾರತದಲ್ಲಿ ಎನ್‌ಜಿಒ ವಲಯಕ್ಕೆ ಹಣಕಾಸಿನ ನೆರವು ನೀಡಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಜಾರ್ಜ್ ಸೊರೊಸ್‌ಗೆ ಇಡಿ ಶಾಕ್ – ಓಪನ್ ಸೊಸೈಟಿ ಫೌಂಡೇಶನ್ ಕಚೇರಿ ಮೇಲೆ ದಾಳಿ
ಇಡಿ ತನಿಖೆಯ ಪ್ರಕಾರ, ಸೊರೊಸ್ ಆರ್ಥಿಕ ಅಭಿವೃದ್ಧಿ ನಿಧಿಯು ರೂಟ್‌ಬ್ರಿಡ್ಜ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (RSPL), ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್ (RAPL) ಮತ್ತು ಅಸರ್ ಸೋಶಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ (ASAR) ಎಂಬ ಮೂರು ಭಾರತೀಯ ಕಂಪನಿಗಳಿಗೆ ವಿದೇಶಿ ನೇರ ಹೂಡಿಕೆ (FDI) ಮತ್ತು ಸಲಹಾ/ಸೇವಾ ಶುಲ್ಕದ ಹೆಸರಿನಲ್ಲಿ ಹಣದ ನೆರವು ನೀಡಿದೆ. ಈ ಕಂಪನಿಗಳು 2020-21 ರಿಂದ 2023-24ರ ನಡುವೆ ಸುಮಾರು 25 ಕೋಟಿ ರೂ.ಗಳ ನೆರವನ್ನು ಪಡೆದಿವೆ. ಆದ್ರೆ ಸೊರೊಸ್‌ನ ಓಪನ್ ಸೊಸೈಟಿ ಇನ್‌ಸ್ಟಿಟ್ಯೂಟ್ (OSI) ಅನ್ನು ಮೇ 2016 ರಿಂದ ಅನಪೇಕ್ಷಿತ ಚಟುವಟಿಕೆಗಳಿಗಾಗಿ ಗೃಹ ಸಚಿವಾಲಯವು ಕಣ್ಗಾವಲಿನಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ.
ಇಡಿ ಪ್ರಕಾರ, ಎಸ್‌ಇಡಿಎಫ್‌ನಿಂದ ಆರ್‌ಎಸ್‌ಪಿಎಲ್ 18.64 ಕೋಟಿ ರೂ.ಗಳನ್ನು ಪರಿವರ್ತಿಸಬಹುದಾದ ಆದ್ಯತೆಯ ಷೇರುಗಳ (CCPS) ರೂಪದಲ್ಲಿ ಪಡೆದುಕೊಂಡಿದೆ. ಇದರ ಮೌಲ್ಯವು ಪ್ರತಿ ಷೇರಿಗೆ 2.5 ರಿಂದ 2.6 ಲಕ್ಷ ರೂ.ಗಳಷ್ಟಿದೆ. ಎಫ್‌ಸಿಆರ್‌ಎ ನಿಬಂಧನೆಗಳನ್ನು ತಪ್ಪಿಸಲು ಇದು ಅಡ್ಡಮಾರ್ಗ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಏಕೆಂದರೆ ಸರ್ಕಾರದ ಪೂರ್ವಾನುಮತಿಯಿಲ್ಲದೇ ಭಾರತೀಯ ಎನ್‌ಜಿಒಗಳಿಗೆ ನೇರವಾಗಿ ದೇಣಿಗೆ ನೀಡಲು SEDFಗೆ ಯಾವುದೇ ಅನುಮತಿ ಇಲ್ಲ ಎಂದು ಹೇಳಲಾಗಿದೆ. ಇನ್ನೂ ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್‌ಗೆ (RAPL) 2.70 ಕೋಟಿ ರೂ.ಗಳ ನೆರವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಭಾರತ ವಿರೋಧಿ ಸೊರೊಸ್ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್ ರಿಜಿಜು
ಮಾರಿಷಸ್ ಸಂಪರ್ಕ
ಮಾರಿಷಸ್ ಮೂಲದ ಆಸ್ಪಾದ ಇನ್ವೆಸ್ಟ್‌ಮೆಂಟ್ ಕಂಪನಿ (ಎಐಸಿ) ಮೂಲಕ ಒಎಸ್‌ಐಗೆ ಸಂಬಂಧಿಸಿದ ಹಣವನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. 2013 ರಲ್ಲಿ ಬೆಂಗಳೂರಿನಲ್ಲಿ ನೋಂದಾಯಿಸಲಾದ Aspada Investment Advisors Pvt Ltd (AIAPL), SEDFನ ಭಾರತೀಯ ಹೂಡಿಕೆಗಳನ್ನು ನಿರ್ವಹಿಸಿತು ಮತ್ತು ಸಲಹೆ ನೀಡಿತು ಎಂಬುದನ್ನು ಇಡಿ ತನಿಖೆ ಬಹಿರಂಗಪಡಿಸಿದೆ. ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ಬಂದ್! ಪರಿಣಾಮವೇನು?
ಯಾರು ಈ ಸೊರಸ್?
94 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.
ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು. ಇದನ್ನೂ ಓದಿ: ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್ ಆಗಿದ್ದು ಯಾಕೆ?
ಸದ್ಯ ಸೊರಸ್ 720 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ.