ಚೆನ್ನೈ: ಎಂಪುರಾನ್ (Empuraan) ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಗೋಕುಲಂ ಚಿಟ್ ಫಂಡ್‌ನ (Sree Gokulam Chits) ತಮಿಳುನಾಡು ಮತ್ತು ಕೇರಳದ ವಿವಿಧ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಅಡಿಯಲ್ಲಿ ಇಡಿ ಶೋಧ ನಡೆಸುತ್ತಿದೆ. ಗೋಕುಲಂ ಗೋಪಾಲನ್ (Gokulam Gopalan) ಎಂದೇ ಜನಪ್ರಿಯವಾಗಿರುವ ಎ.ಎಂ. ಗೋಪಾಲನ್ ಅವರು ತಮಿಳುನಾಡು, ಕೇರಳ, ತೆಲಂಗಾಣ, ಪುದುಚೇರಿ, ಮಹಾರಾಷ್ಟ್ರ, ನವದೆಹಲಿ, ಆಂಧ್ರಪ್ರದೇಶ ಪಾಂಡಿಚೇರಿ ಮತ್ತು ಹರಿಯಾಣದಲ್ಲಿ ಶ್ರೀ ಗೋಕುಲಂ ಚಿಟ್ಸ್ ಫಂಡ್ ಕಚೇರಿಯನ್ನು ತೆರೆದಿದ್ದಾರೆ.
ಗೋಕುಲಂ ಚಿಟ್ಸ್ ಮೇಲೆ ದಾಳಿಯಾಗುತ್ತಿರುವುದು ಇದೇ ಮೊದಲಲ್ಲ. ಏಪ್ರಿಲ್ 2017 ರಲ್ಲಿ, ತೆರಿಗೆ ವಂಚನೆಗಾಗಿ ಆದಾಯ ತೆರಿಗೆ (Income Tax) ಇಲಾಖೆ ಮೂರು ರಾಜ್ಯಗಳಲ್ಲಿ ಶ್ರೀ ಗೋಕುಲಂ ಚಿಟ್ಸ್ ಫಂಡ್ ಮೇಲೆ ದಾಳಿ ನಡೆಸಿತ್ತು.
ಕಂಪನಿಯು ಭಾರೀ ಪ್ರಮಾಣದ ಆದಾಯವನ್ನು ಉದ್ದೇಶಪೂರ್ವಕವಾಗಿ ಮರೆಮಾಡಿದೆ. ಐದು ವರ್ಷಗಳಲ್ಲಿ 1,107 ಕೋಟಿ ರೂ. ಆದಾಯ ಬಹಿರಂಗಪಡಿಸದ ಕಾರಣ ದೊಡ್ಡ ಮೊತ್ತದ ತೆರಿಗೆಯನ್ನು ಪಾವತಿಸುವುದನ್ನು ವಂಚಿಸಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಆಗಸ್ಟ್ 2019 ರಲ್ಲಿ ಗೋಕುಲಂ ಗೋಪಾಲನ್ ಅವರ ಪುತ್ರ ಬೈಜು ಗೋಪಾಲನ್ ಜೈಲಿಗೆ ಹೋಗಿದ್ದರು.
ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿರುವ ನಟ ಮೋಹನ್ ಲಾಲ್(Mohanlal) ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಎಲ್2: ಎಂಪುರಾನ್ ಬಿಡುಗಡೆಯಾದ ಬಳಿಕ ವಿವಾದಕ್ಕೆ ಸಿಲುಕಿದೆ. ಈ ತಿಂಗಳ 27ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿನ ಕೆಲವು ದೃಶ್ಯಗಳು ನಿರ್ದಿಷ್ಟ ಗುಂಪಿನ ಜನರಿಗೆ ಆಕ್ಷೇಪಾರ್ಹವಾಗಿವೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಟೀಕೆಯ ಬಳಿಕ ಮೋಹನ್ ಲಾಲ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದರು.
ವಿವಾದವಾಗುತ್ತಿದ್ದಂತೆ ಚಿತ್ರದಲ್ಲಿರುವ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು, ವಿರೋಧಿ ಬಾಬಾ ಬಜರಂಗಿ ಹೆಸರನ್ನು ಬದಲಾಯಿಸಲಾಗುವುದು ಮತ್ತು ಜೊತೆಗೆ ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗುವುದು ಚಿತ್ರತಂಡ ಪ್ರಕಟಿಸಿತ್ತು.