ಮಂಡ್ಯ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸಿರುವ ಪ್ರಕರಣಕ್ಕೆ (Nagamangala Land Scam) ಸಂಬಂಧಿಸಿದಂತೆ ನಾಗಮಂಗಲ ತಾಲೂಕು ಕಚೇರಿ ಹಾಗೂ ನಾಮಗಂಗಲ ಪೊಲೀಸ್ ಠಾಣೆಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಸರ್ಕಾರಿ ಭೂಮಿ ಕಬಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 200 ಕೋಟಿ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ಹಣಕಾಸಿನ ವರ್ಗಾವಣೆ ಕುರಿತಂತೆ ಮಾಹಿತಿ ಸಂಗ್ರಹಿಸಲು ಹಾಗೂ ದಾಖಲೆಗಳ ಪರಿಶೀಲನೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿ, ಸಂಬಂಧಪಟ್ಟ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವುದು ಭೂಮಿ ಗೋಲ್ ಮಾಲ್ ಪ್ರಕರಣ ಮತ್ತುಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಹಣಕಾಸಿನ ಹರಿದಾಟ ಯಾವ ರೀತಿ ನಡೆದಿದೆ, ಯಾರ್ಯಾರ ನಡುವೆ ನಡೆದಿದೆ, ತಾಲೂಕು ಕಚೇರಿ ನೌಕರರು, ಸಿಬ್ಬಂದಿ ಹಾಗೂ ಹೊರಗಿನ ಖಾಸಗಿ ವ್ಯಕ್ತಿಗಳಲ್ಲದೆ, ಪ್ರಭಾವಿ ರಾಜಕಾರಣಿಗಳ ನಡುವೆಯೂ ಹಣಕಾಸಿನ ವಹಿವಾಟು ನಡೆದಿರಬಹುದೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರು ನೀಡಿದ್ದ ದೂರಿನನ್ವಯ ಜ.13 ರಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಾಲೂಕು ಕಚೇರಿ ಸೇರಿ ಏಳು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಾಗುವಳಿ ವಿತರಣಾ ವಹಿಗಳಲ್ಲಿ ತಿದ್ದುಪಡಿ, ಸರ್ಕಾರಿ ದಾಖಲೆಗಳ ತಿದ್ದುಪಡಿ, ಹೆಚ್ಚುವರಿ ಫಲಾನುಭವಿಗಳ ಹೆಸರು ಅಕ್ರಮ ಸೇರ್ಪಡೆ, ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು, ತಾಲೂಕು ಕಚೇರಿಯ ದಾಖಲೆಗಳು ಸಿಬ್ಬಂದಿಯ ಕಾರು ಹಾಗೂ ಮನೆಗಳಲ್ಲಿ ಪತ್ತೆಯಾಗಿದ್ದವು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಹತ್ತು ಮಂದಿ ವಿರುದ್ಧ ಎಫ್‌ಆರ್‌ಐ ದಾಖಲಿಸಿದ್ದರು. ನಾಗಮಂಗಲ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆಗೆ ನಾಗಮಂಗಲ ಡಿವೈಎಸ್ಪಿ ಬಿ.ಚಲುವರಾಜು ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿಲಾಗಿತ್ತು.

