ಅಕ್ರಮವಾಗಿ ಹಣ ಸಾಗಾಣಿಕೆ ವಿಚಾರವಾಗಿ ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಜಾರಿ ನಿರ್ದೇಶನಾಲಯವು (ED) ಕೇಸ್ ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕುರಿತಂತೆ ಉತ್ತರ ಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ದಾಖಲಾದ ಎಫ್.ಐ.ಆರ್ (FIR) ಮತ್ತು ಜಾರ್ಜ್ ಶೀಟ್ ಗಳ ಆಧಾರದಲ್ಲಿ ಇಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈ ಹಿಂದೆ ಎಲ್ವಿಶ್ ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದರು. ಕೋರ್ಟ್‌ಗೆ ಹಾಜರು ಪಡಿಸಿದ್ದರು. ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಪೊಲೀಸರು ಸಲ್ಲಿಸಿದ್ದ ಜಾರ್ಜ್ ಶೀಟ್ ನಲ್ಲಿ ಅಕ್ರಮ ಹಣದ ಕುರಿತಂತೆ ಉಲ್ಲೇಖವಾಗಿತ್ತು. ಹಾಗಾಗಿ ಈ ಪ್ರಕರಣಕ್ಕೆ ಇಡಿ ಎಂಟ್ರಿ ಕೊಟ್ಟಿದೆ.