ಮೈಸೂರು: ಮುಡಾ ಸೈಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡ್ಡಾ ಬೆಂಬಲಿಗ ರಾಕೇಶ್ ಪಾಪಣ್ಣ (Rakesh Papanna) ಅವರ ಮೈಸೂರಿನ ನಿವಾಸ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಅವರ ಬೆಂಗಳೂರಿನ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ.
ಸಿಎಂ ಆಪ್ತನ ಮನೆ ಮೇಲೂ ಇ.ಡಿ ತಲಾಶ್:
ಸಿಎಂ ಆಪ್ತ ರಾಕೇಶ್ ಪಾಪಣ್ಣಗೂ ಶಾಕ್ ನೀಡಿರುವ ಜಾರಿ ನಿರ್ದೇಶನಾಲಯ (ED) ಮೈಸೂರಿನ ಹಿನಕಲ್ ನಿವಾಸದ ಮೇಲೆ ದಾಳಿ ನಡೆಸಿ, ತೀವ್ರ ಶೋಧ ನಡೆಸಿದೆ. ಅಲ್ಲದೇ ರಾಕೇಶ್ ಪಾಪಣ್ಣ ಅವರನ್ನೂ ವಿಚಾರಣೆಗೆ ಒಳಪಡಿಸಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಲ್ಲೇಶ್ವರದ 10ನೇ ಕ್ರಾಸ್‌ನಲ್ಲಿರುವ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಳು ತೀವ್ರ ಶೋಧ ನಡೆಸುತ್ತಿದ್ದಾರೆ. ವಿವಿಧ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಕೇಶ್ ಪಾಪಣ್ಣಗೆ ಯಾಕೆ ಇಡಿ ಬಿಸಿ?
ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗನಾದ ರಾಕೇಶ್ ಪಾಪಣ್ಣಗೆ ಇದೇ ವರ್ಷದ ಜೂನ್ ನಲ್ಲಿ ಅಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ 50:50 ಅನುಪಾತದಲ್ಲಿ ಒಟ್ಟು 98,850 ಚದರ ಅಡಿ ಜಾಗವನ್ನು ಪರಿಹಾರ ರೂಪದಲ್ಲಿ ನೀಡಿದ್ದರು. ಅಲ್ಲದೇ ಕೆಲವು 50:50 ಅನುಪಾತದ ನಿವೇಶನ ಹಂಚಿಕೆಯಲ್ಲೂ ರಾಕೇಶ್ ಪಾಪಣ್ಣ ಮಧ್ಯಸ್ಥಿಕೆ ಇದೆ ಎಂಬ ಆರೋಪ ಕೇಳಿಬಂದಿದೆ.
ಡಿ.ಬಿ ನಟೇಶ್ ಮೇಲಿನ ಆರೋಪಗಳೇನು?
ಡಿ.ಬಿ ನಟೇಶ್, 2020 ರಿಂದ 2022ರವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ವಿಜಯನಗರದಲ್ಲಿ 14 ಸೈಟ್ ಮಂಜೂರು ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ನಟೇಶ್ ಅವಧಿಯಲ್ಲೇ 50:50 ಅನುಪಾತದ ಅಡಿ 500ಕ್ಕೂ ಹೆಚ್ಚು ನಿವೇಶನ ಹಂಚಲಾಗಿದೆ. ಬದಲಿ ನಿವೇಶನಗಳು ಕೂಡ ಇದೇ ವೇಳೆಯ ಹಂಚಿಕೆ ಆಗಿದೆ ಎಂಬ ಆರೋಪ ಇವರ ಮೇಲೆ ಇರುವುದಾಗಿ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಮಾಜಿ ಆಯುಕ್ತ ದಿನೇಶ್ ಕುಮಾರ್ ಮೇಲಿನ ಆರೋಪ ಏನು?
ನಟೇಶ್ ಅವರ ನಂತರ 2022ರ ಮೇ ನಿಂದ 2024ರ ಜುಲೈ ವರೆಗೆ ದಿನೇಶ್ ಕುಮಾರ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು. ಇವರ ಅವಧಿಯಲ್ಲಿ ಅತ್ಯಧಿಕ ಅಂದರೆ 1 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಲಾಗಿತ್ತು. ಅಲ್ಲದೇ ನೂರಾರು ಸೈಟ್‌ಗಳ ಮೂಲ ವಾರುಸದಾರರಿಗೆ ಪರಿಹಾರ ಹೋಗಿದ್ದರೂ ಮತ್ತೆ ಪರಿಹಾರ ರೂಪದಲ್ಲಿ ನಿವೇಶನ ನೀಡಲಾಗಿದೆ. ಬಹಳಷ್ಟು ನಿವೇಶನಗಳ ವಾರಸುದಾರರನ್ನ ಸೃಷ್ಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿದೆ.
ಅಲ್ಲದೇ ಸಿಎಂ ಪತ್ನಿಯ ದಾಖಲೆ ಮೇಲೆ ವೈಟ್ನರ್ ಹಾಕಿರುವ ಪ್ರಕರಣದಲ್ಲೂ ಇವರ ಹೆಸರು ಕೇಳಿ ಬಂದಿದೆ.



