ಆರ್ಥಿಕ ಸಮೀಕ್ಷೆ 2018-19 – ಜಿಡಿಪಿ ಶೇ.7ರ ನಿರೀಕ್ಷೆ

Public TV
2 Min Read
nirmala sitharaman

ನವದೆಹಲಿ: ವಾರ್ಷಿಕ ಶೇ.8ರ ದರದಲ್ಲಿ ಜಿಡಿಪಿ ಬೆಳವಣಿಗೆಯಾದರೆ 2025ರ ವೇಳೆಗೆ ಭಾರತ 5 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆಯ ದೇಶವಾಗಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ಬಜೆಟ್ ಮಂಡನೆಯ ಮುನ್ನ ದಿನವಾದ ಗುರುವಾರ ಲೋಕಸಭೆಯಲ್ಲಿ ಪ್ರತಿ ಬಾರಿಯಂತೆ ಆರ್ಥಿಕ ಸಮೀಕ್ಷೆ ಮಂಡನೆಯಾಗಿದೆ. ಆರ್ಥಿಕ ಮುನ್ನೋಟದ ಸಮಗ್ರ ವಿವರ, ಪ್ರಮುಖ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ, ದೇಶದ ಬೆಳವಣಿಗೆಯನ್ನು ವಿವರಿಸುವ ಆರ್ಥಿಕ ಸಮೀಕ್ಷೆಯನ್ನು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ನೇತೃತ್ವದ ತಂಡ ತಯಾರಿಸಿದ್ದು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು
* ವಾರ್ಷಿಕವಾಗಿ ಶೇ.8 ಜಿಡಿಪಿ ಬೆಳವಣಿಗೆ ಸಾಧಿಸಿದರೆ 2025ರ ಹಣಕಾಸು ವರ್ಷದಲ್ಲಿ 5 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆಯ ದೇಶವಾಗಿ ಭಾರತ ಹೊರಹೊಮ್ಮಬಹುದು.
* 2019-20ರಲ್ಲಿ ಜಿಡಿಪಿ ಶೇ.7ರಷ್ಟು ಇರುವ ನಿರೀಕ್ಷೆ
* 2018-19 ಸಾಲಿನಲ್ಲಿ 283.7 ಮಿಲಿಯನ್ ಟನ್ ಆಹಾರ ಉತ್ಪಾದನೆ
* ಶೇ.5.8 ರಷ್ಟು ವಿತ್ತೀಯ ಕೊರತೆ
* ಸ್ವಚ್ಛ ಭಾರತ ಅಭಿಯಾನ ಆರಂಭದ ಬಳಿಕ ದೇಶದಲ್ಲಿ 9.5 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣ, 5.5 ಲಕ್ಷಕ್ಕೂ ಅಧಿಕ ಗ್ರಾಮಗಳು ಬಯಲು ಶೌಚಾಲಯದಿಂದ ಮುಕ್ತವಾಗಿದೆ.

* ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಅಭಿವೃದ್ಧಿ ದರ ಈ ರೀತಿಯಾಗಿದೆ. 2016-17ರಲ್ಲಿ ಶೇ.6.3, 2017-18ರಲ್ಲಿ ಶೇ.5.0 ಮತ್ತು 2018-19ರಲ್ಲಿ ಶೇ.2.9
* 2017-18 ಸಾಲಿನಲ್ಲಿ ರಫ್ತು ಪ್ರಮಾಣ ಹೆಚ್ಚಾಗಿದ್ದು, ಆಮದು ಕಡಿಮೆಯಾಗಿದೆ. 2017-18ರಲ್ಲಿ ಶೇ.17.6ರಷ್ಟು ಆಮದು, ಶೇ.4.7ರಷ್ಟು ರಫ್ತು ಇತ್ತು. 2018-19ರಲ್ಲಿ ಆಮದು ಶೇ.15.4 ಮತ್ತು ರಫ್ತು ಶೇ.12.5ರಷ್ಟಿದೆ.
* 2017-18 ಸಾಲಿಗಿಂತ 2018-19ರಲ್ಲಿ ವಿದೇಶಿ ಹಣ ಸಂಗ್ರಹಣ ಕಡಿಮೆಯಾಗಿದೆ. 424.5 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 412.9 ಬಿಲಿಯನ್ ಅಮೆರಿಕನ್ ಡಾಲರ್ ಗೆ ಇಳಿಕೆಯಾಗಿದೆ.

* ಕೇಂದ್ರದಲ್ಲಿ ಬಹುಮತ ಪಡೆದ ಸರ್ಕಾರ ರಚನೆಯಾಗಿದ್ದು, ಭವಿಷ್ಯದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
* 2019-20ರ ಹಣಕಾಸಿನ ವರ್ಷದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

* ನೇರ ತೆರಿಗೆ ಸಂಗ್ರಹಣೆಯಲ್ಲಿ ಶೇ.13.4ರಷ್ಟು ಹೆಚ್ಚಳವಾಗೋದರ ಜೊತೆಗೆ ಕಾರ್ಪೋರೇಟ್ ಟ್ಯಾಕ್ಸ್ ನಲ್ಲಿಯೂ ಏರಿಕೆ ಕಂಡಿದೆ. ಇನ್ನು ಪರೋಕ್ಷ ತೆರಿಗೆ ಸಂಗ್ರಹ ಶೇ.16ರಷ್ಟು ಇಳಿಕೆಯಾಗಿದೆ. ಜಿಎಸ್‍ಟಿ ಆದಾಯ ಕಡಿಮೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

 

* ಆರ್ಥಿಕ ವರ್ಷದಲ್ಲಿ 97 ಲಕ್ಷ ಕಾರ್ಮಿಕರ ಸಂಖ್ಯೆ ಹೆಚ್ಚಳವಾಗಲಿದೆ. 2030ರೊಳಗೆ ಕಾರ್ಮಿಕ ವಲಯದಲ್ಲಿ ಪ್ರತಿ ವರ್ಷ 42 ಲಕ್ಷ ಶ್ರಮಿಕರ ಸಂಖ್ಯೆ ಏರಿಕೆಯಾಗಲಿದೆ.

* ಆರ್ಥಿಕ ಸಮೀಕ್ಷೆಯು ಜಲಕ್ಷಾಮದ ಮುನ್ಸೂಚನೆಯನ್ನೂ ಗಂಭೀರವಾಗಿ ಪರಿಗಣಿಸಿದೆ. 2050ರಷ್ಟರಲ್ಲಿ ಭಾರತದಲ್ಲಿ ಜಲ ಸಂಗ್ರಹಣೆಯೂ ಕಷ್ಟಕರವಾಗಲಿದೆ ಎಂದು ಸರ್ವೆಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ. ಹೀಗಾಗಿ ಈ ವರ್ಷದಿಂದಲೇ ಹನಿ ನೀರಾವರಿ ಪದ್ಧತಿಯನ್ನು ಜಾರಿಗೊಳಿಸಿ ಕೃಷಿ ಉತ್ಪಾದನೆಯತ್ತ ಹೆಚ್ಚು ಮಾಡಲು ಗಮನ ಹರಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *