ಚಂಡೀಗಢ: ಉಚಿತ ಯೋಜನೆಗಳನ್ನು (Free Scheme) ಘೋಷಣೆ ಮಾಡಿ ಆರ್ಥಿಕ ಸಂಕಷ್ಟಕ್ಕೆ (Economic Crisis) ಸಿಲುಕಿರುವ ಪಂಜಾಬ್ ಆಪ್ ಸರ್ಕಾರ ಪೆಟ್ರೋಲ್ (Petrol) ಮತ್ತು ಡಿಸೇಲ್ ಮೇಲೆ ವ್ಯಾಟ್ ಹೆಚ್ಚಿಸಿ ವಿದ್ಯುತ್ ಸಬ್ಸಿಡಿಯನ್ನು (Power Subsidy) ರದ್ದುಗೊಳಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (VAT) ಹೆಚ್ಚಳಕ್ಕೆ ಪಂಜಾಬ್ ಕ್ಯಾಬಿನೆಟ್ ಗುರುವಾರ ಅನುಮೋದನೆ ನೀಡಿದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ದರ 61 ಪೈಸೆ ಮತ್ತು ಡೀಸೆಲ್ ದರ 92 ಪೈಸೆ ಏರಿಕೆಯಾಗಲಿದೆ.
7 ಕಿಲೋವ್ಯಾಟ್ ವರೆಗಿನ ವಿದ್ಯುತ್ ಬಳಕೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ. ಇದರ ಜೊತೆ ಬಸ್ ಟಿಕೆಟ್ ದರ ಪ್ರತಿ ಕಿ.ಮೀ.ಗೆ 23 ಪೈಸೆ ಏರಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟದ ಚರ್ಚೆಯ ನಂತರ, ರಾಜ್ಯ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ವ್ಯಾಟ್ ಏರಿಸುವ ಮೂಲಕ ರಾಜ್ಯ ಹೆಚ್ಚುವರಿ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ವಿದ್ಯುತ್ ಸಬ್ಸಿಡಿಯನ್ನು ರದ್ದುಗೊಳಿಸಿದ ನಿರ್ಧಾರಗಳನ್ನು ಸಮರ್ಥಿಸಿಕೊಂಡ ಚೀಮಾ ಇದರಿಂದ 1,500-1700 ಕೋಟಿ ರೂ. ಉಳಿಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಸಾಲವೆಂಬ ಪರ್ವತಗಳ ಸುಳಿಯಲ್ಲಿ ಹಿಮಾಚಲ – ಆರ್ಥಿಕ ಅಪಾಯದಲ್ಲಿರುವ ರಾಜ್ಯಗಳು ಯಾವುವು? ತಜ್ಞರು ಸೂಚಿಸುವ ಪರಿಹಾರವೇನು?
ವಾರ್ಷಿಕವಾಗಿ ಡೀಸೆಲ್ ಮಾರಾಟದಿಂದ 395 ಕೋಟಿ ರೂ. ಮತ್ತು ಪೆಟ್ರೋಲ್‌ನಿಂದ 150 ಕೋಟಿ ರೂ. ಹೆಚ್ಚುವರಿಯಾಗಿ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
ಕಾಂಗ್ರೆಸ್ ಚನ್ನಿ ಸರ್ಕಾರ ಘೋಷಣೆ ಮಾಡಿದ ಉಚಿತ ಭರವಸೆಗಳಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ ಆಪ್ ಸರ್ಕಾರ ತಿಳಿಸಿದೆ. ಚನ್ನಿ ಸರ್ಕಾರ 2021ರಲ್ಲಿ 7 ಕಿಲೋವ್ಯಾಟ್‌ವರೆಗಿನ ಗೃಹ ಬಳಕೆಯ ವಿದ್ಯುತ್ ಶುಲ್ಕವನ್ನು ಪ್ರತಿ ಯುನಿಟ್‌ಗೆ 3 ರೂ.ಗೆ ಇಳಿಕೆ ಮಾಡಿತ್ತು. 7 ಕಿಲೋ ವ್ಯಾಟ್‌ವರೆಗೂ ಇದರ ಲಾಭ ಪಡೆಯಲು ಅವಕಾಶವಿತ್ತು.
ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರವು ಗೃಹ ಬಳಕೆದಾರರಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು ಈ ಯೋಜನೆ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಸಬ್ಸಿಡಿ ಮಾತ್ರ ಈಗ ರದ್ದುಗೊಂಡಿದೆ.
ಹಿಮಾಚಲದಂತೆ ಪಂಜಾಬ್ ಉಚಿತ ಯೋಜನೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸೆ.4 ರವರೆಗೆ ಸರ್ಕಾರಿ ನೌಕರರಿಗೆ ಸಂಬಳ ಪಾವತಿಯಾಗಿರಲಿಲ್ಲ. ಮಾರ್ಚ್‌ನಲ್ಲಿ ಮಂಡನೆಯಾದ ಬಜೆಟ್ ಭಾಷಣದಲ್ಲಿ ಹರ್ಪಾಲ್ ಚೀಮಾ ಅವರು 2024-25 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪಂಜಾಬ್‌ನ ಸಾಲವು 3.74 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ತಿಳಿಸಿದ್ದರು.
ಆಪ್ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿದೆ.