Connect with us

Chamarajanagar

ಜಿಲ್ಲಾ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿಯವರಿಂದ ವಿದ್ಯುಕ್ತ ಚಾಲನೆ

Published

on

ಚಾಮರಾಜನಗರ: ಆರ್ಥಿಕ ಗಣತಿಯಿಂದ ದೇಶದ ಪ್ರಗತಿಯ ಸೂಚ್ಯಂಕಗಳಾದ ರಾಷ್ಟ್ರೀಯ ತಲಾ ಆದಾಯ, ಜಿಡಿಪಿಗಳು ತಿಳಿಯುವುದರಿಂದ, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರ ಮಾಹಿತಿ ನೀಡಿ, ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲೆಯ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್ಥಿಕ ಗಣತಿಯು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಡೆಯಲಿದ್ದು, ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳ ಸಂಘಟಿತ ಮತ್ತು ಅಸಂಘಟಿಕ ವಲಯಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಹೊಂದಿರುವ ಉದ್ಯಮಗಳನ್ನು ಪಟ್ಟಿ ಮಾಡಲಾಗುತ್ತದೆ. ಈ ಮೂಲಕ ರಾಜ್ಯ ಹಾಗೂ ದೇಶದ ಆರ್ಥಿಕ ಸ್ಥಿತಿಗತಿಯನ್ನು ಅರಿಯುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಸರ್ಕಾರಿ ಯೋಜನೆಗಳನ್ನು ರೂಪಿಸಲು ಆರ್ಥಿಕ ಗಣತಿ ಸಹಾಯಕವಾಗಲಿದೆ ಎಂದು ಹೇಳಿದರು.

ಆರ್ಥಿಕ ಗಣತಿಯನ್ನು 1977ರಿಂದ ಮೊದಲ್ಗೊಂಡು ಪ್ರತಿ 5 ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ ಕೈಗೊಳ್ಳಲು ನಗರ ಪ್ರದೇಶಗಳಿಗೆ 80, ಗ್ರಾಮೀಣ ಪ್ರದೇಶಕ್ಕೆ 656 ಸೇರಿದಂತೆ ಒಟ್ಟು 736 ಗಣತಿದಾರರನ್ನು ನಿಯೋಜಿಸಲಾಗಿದೆ. ಜತೆಗೆ 130 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ನಿಯೋಜಿತ ಗಣತಿದಾರರು ಪ್ರತಿ ಮನೆ, ವ್ಯಾವಹಾರಿಕ ಕಟ್ಟಡಗಳಿಗೆ ಭೇಟಿ ನೀಡಿ, ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.

7ನೇ ಆರ್ಥಿಕ ಗಣತಿಯನ್ನು ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಕಾಗದ ಪ್ರಕ್ರಿಯೆಯ ಎಲ್ಲಾ ತೊಡಕುಗಳನ್ನು ನಿವಾರಿಸಲಾಗಿದೆ. ಗಣತಿ ಪ್ರಕ್ರಿಯೆಯು ಡಿಜಿಟಲ್ ಆಗಿರುವುದರಿಂದ, ಗಣತಿ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಆದ್ದರಿಂದ ಸಾರ್ವಜನಿಕರು ಗಣತಿದಾರರಿಗೆ ಮಾಹಿತಿ ಒದಗಿಸಿ, ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅನಿತಾ, ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಇ)ದ ಜಿಲ್ಲಾ ವ್ಯವಸ್ಥಾಪಕರಾದ ವೃಷಬೇಂದ್ರ, ಸಿಎಸ್‍ಇ ಜಿಲ್ಲಾ ಸಂಯೋಜಕರಾದ ಎಸ್. ಮಹೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *