ಒಂದೂವರೆ ತಿಂಗಳ ಹಿಂದೆಯೇ ಕೊಡಗಿನಲ್ಲಿ ಭೂಕಂಪ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ

Public TV
2 Min Read
KODAGU EARTH QUAKE

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಜಲ ಪ್ರಳಯವಾಗುವ ಮುನ್ನ ಒಂದೂವರೆ ತಿಂಗಳ ಮೊದಲು ಭೂಕಂಪವಾಗಿತ್ತು ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

ಜುಲೈ 9ರ ಮಧ್ಯಾಹ್ನ 12.52ಕ್ಕೆ ಕೊಡಗು ಜಿಲ್ಲೆಯ 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 3.4 ತೀವ್ರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಈ ಸಂಬಂಧ ಅದೇ ದಿನ ಸಂಜೆ 4.58ಕ್ಕೆ ಭೂಕಂಪ ನಡೆದ ಸ್ಥಳದ ಮಾಹಿತಿಯನ್ನು ಟ್ವೀಟ್ ಮಾಡಿ ತಿಳಿಸಿತ್ತು.

ಆದರೆ ಹವಾಮಾನ ಇಲಾಖೆಯ ವರದಿಯನ್ನು ಅಲ್ಲಗಳೆದಿರುವ ಭೂಗರ್ಭ ಶಾಸ್ತ್ರಜ್ಞರಾದ ಪ್ರಕಾಶ್‍ರವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇದು ಭೂಕಂಪನದಿಂದಾಗಿ ಸಂಭವಿಸಿದ ಘಟನೆಯಲ್ಲ, ಜಲಪ್ರಳಯದಿಂದಾಗಿ ಸಂಭವಿಸಿದ ಅವಘಡವಾಗಿದೆ. ಭೂಕಂಪನದ ಬಗ್ಗೆ ಹವಾಮಾನ ಇಲಾಖೆಗೆ ಹೇಗೆ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿಲ್ಲ. ಒಂದು ವೇಳೆ ಭೂಕಂಪನವಾಗಿದ್ದರೆ, ನಮ್ಮ ಹಾರಂಗಿ, ಗೌರಿಬಿದನೂರು ಹಾಗೂ ಹೈದರಬಾದ್ ನಲ್ಲಿರುವ ಭೂಕಂಪ ಮಾಪನ ಕೇಂದ್ರದಲ್ಲಿ ದಾಖಲಾಗುತಿತ್ತು. ಅಲ್ಲದೇ ಅರಬ್ ಹಾಗೂ ಅಮೆರಿಕ ದೇಶಗಳಲ್ಲಿ ವಿಶ್ವದ ಯಾವುದೇ ಭಾಗಗಳಲ್ಲಿ ಭೂಕಂಪನ ಉಂಟಾದರೆ, ಪತ್ತೆಹಚ್ಚುವ ಕೇಂದ್ರಗಳಲ್ಲಿಯೂ ಈ ಬಗ್ಗೆ ವರದಿಯಾಗಿಲ್ಲ. ಒಂದು ವೇಳೆ ವರದಿಯಾಗಿದ್ದರೆ ಕೂಡಲೇ ಅಮೆರಿಕ ಭೂಗರ್ಭ ಇಲಾಖೆಯು ನಮಗೆ ಇ-ಮೇಲ್ ಅಥವಾ ಮೆಸೇಜ್ ಮೂಲಕ 15 ನಿಮಿಷಗಳೊಳಗೆ ಮಾಹಿತಿಯನ್ನು ತಲುಪಿಸುತ್ತವೆ ಎಂದು ತಿಳಿಸಿದರು.

kodagu earthquake 1

ಈ ಮೊದಲು 1924ರಲ್ಲಿ ಕೂರ್ಗ್ ಹಾಗೂ ಕೇರಳದಲ್ಲಿ ಈ ರೀತಿ ಭೂ-ಕುಸಿತ ಉಂಟಾಗಿತ್ತು, ಇದಕ್ಕೆ ಕಾರಣವನ್ನು ಹುಡುಕುತ್ತಾ ಹೊರಟಾಗ ಹವಾಯ್ ದ್ವೀಪದಲ್ಲಿ ಪ್ರಬಲವಾದ ಜ್ವಾಲಾಮುಖಿ ಉಂಟಾಗಿದ್ದರಿಂದ ಸುಮಾರು 28 ದಿನಗಳು ಲಾವಾರಸ ಹೊರ ಬಂದಿತ್ತು. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಇಲ್ಲೂ ಭೂ-ಕುಸಿತವಾಗಿತ್ತು. ಆದರೆ ಅಂದು ಜನವಸತಿ ಕಡಿಮೆಯಿದ್ದರಿಂದ ಯಾವುದೇ ತೊಂದರೆಯಾಗಿರಲಿಲ್ಲವೆಂದು ಹೇಳಿದರು.

ಭೂ-ಕುಸಿತಗಳ ಬಗ್ಗೆ ಅಧ್ಯಯನ ನಡೆಸಲು, ಭಾರತೀಯ ಭೂ-ವೈಜ್ಞಾನಿಕ ಸಮೀಕ್ಷೆ ಸಂಸ್ಥೆಯಲ್ಲಿ ಪ್ರತ್ಯೇಕವಾದ ವಿಭಾಗವನ್ನು ಹೊಂದಿದೆ. ಇಲ್ಲಿ ಪರಿಣಿತ ಅಧಿಕಾರಿಗಳು ಭೂ-ಕುಸಿತಗಳ ಬಗ್ಗೆ ನಿರಂತರ ಅಧ್ಯಯನ ಮಾಡುತ್ತಿರುತ್ತಾರೆ. ಬುಧವಾರ ನಾವು ಸಂಪಾಜೆ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಭೂ-ಕುಸಿತದ ಬಗ್ಗೆಯೂ ಸಹ ಅಧ್ಯಯನ ನಡೆಯುತ್ತಿದ್ದು, ಎರಡು ತಿಂಗಳ ಒಳಗಡೆ ನಿಖರ ವರದಿಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಈ ವೇಳೆ ಸಾರ್ವಜನಿಕರು ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಕೊಡಗಿನಲ್ಲಿ 50, 60 ಡಿಗ್ರಿ ಇಳಿಜಾರು ಪ್ರದೇಶಗಳಲ್ಲಿರುವ ಗುಡ್ಡಗಾಡು ಪ್ರದೇಶಗಳು ಒಂದಲ್ಲ ಒಂದು ದಿನ ಕುಸಿಯುವುದು ಖಂಡಿತ. ಹೀಗಾಗಿ ಜನರು ಸಮತಟ್ಟವಾದ ಭೂ ಪ್ರದೇಶಗಳಲ್ಲಿ ವಾಸಸ್ಥಳಗಳನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *