ಮಡಿಕೇರಿ: ಕೊಡಗಿನ (Kodagu) ಹಲವೆಡೆ ಬುಧವಾರ (ಮಾ.12) ಬೆಳಗ್ಗೆ 10:50ರ ಸುಮಾರಿಗೆ ಭೂ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ.
ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಗೇರಿ, ಮದೆನಾಡು ಗ್ರಾಮ, ಬೆಟ್ಟತ್ತೂರಿನ ಸುತ್ತಮುತ್ತಲಿನಲ್ಲಿ ಕಂಪನದ ಅನುಭವವಾಗಿದೆ. ಪದ್ಮನಾಭ ಮತ್ತು ಭರತ್ ಎಂಬುವವರ ಮನೆಯ ಅಸುಪಾಸಿನಲ್ಲಿ ಭೂಮಿ ಕಂಪಿಸಿದೆ. 2018ರಲ್ಲಿಯೂ ಈ ಭಾಗದಲ್ಲಿ ಕಂಪನದ ಅನುಭವ ಆಗಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಯೋವರೆಗೂ ದರ್ಶನ್‌ಗೆ ಚಿರಋಣಿ: ರಚಿತಾ ರಾಮ್
ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ. ಭೂಮಿ ಕಂಪಿಸಿದ ಸಂದೇಶವು ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡಿದೆ. ಸ್ಥಳೀಯರಿಂದ ಭೂಕಂಪನದ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ನಮ್ಮ ಪಂಚಾಯತಿ ಸಿಬ್ಬಂದಿಗಳು ಭೂಕಂಪದ ಅನುಭವವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಹೆಚ್ಚಿನ ವಿವರಗಳನ್ನು ಪಡೆಯಲು ಪತ್ರ ಬರೆಯಲು ಕಾರ್ಯಪ್ರವೃತ್ತರಾಗಿದ್ದೇವೆ. ಸುಮಾರು 11 ಗಂಟೆ ವೇಳೆಯಲ್ಲಿ ಗುಡುಗಿನ ರೀತಿಯಲ್ಲಿ ಶಬ್ದ ಅಗಿದೆ ಎಂದು ಇಲ್ಲಿನ ಸಿಬ್ಬಂದಿಗಳು ತಿಳಿಸಿದ್ದಾರೆ ಎಂದು ಮದೆನಾಡು ಗ್ರಾಪಂ ಪಿಡಿಓ ಯಾದವ್ `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಪಿಎಸ್‌ಸಿ ಪರೀಕ್ಷೆಯ ಲೋಪದೋಷಗಳನ್ನು ಪರಿಹರಿಸಿ: ಬಿ.ವೈ.ವಿಜಯೇಂದ್ರ
2018 ರ ರೀತಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವು ಗ್ರಾಮದಲ್ಲಿ ಮತ್ತೆ ಮರುಕಳಿಸದಿರಲಿ ಎಂದು ಗ್ರಾಮಸ್ಥರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.