ಚಿಕ್ಕಮಗಳೂರು: ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸದ್ಯ ಭೂಕಂಪದ ಭಯ ಆವರಿಸಿದೆ.
ಸತತವಾಗಿ ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಈ ಭಾಗದಲ್ಲಿ ಭೂಮಿ ಒಳಗಿನಿಂದ ವಿಚಿತ್ರ ಶಬ್ಧಗಳು ಕೇಳಿ ಬರುತ್ತಿದೆ. ಭಾರೀ ಪ್ರಮಾಣದಲ್ಲಿ ಕೇಳಿಬರುತ್ತಿರುವ ಶಬ್ಧದಿಂದ ಜನರು ಆತಂಕಕ್ಕೀಡಾಗಿದ್ದಾರೆ.
- Advertisement
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ಮೇಗುಂದಾ ಹೋಬಳಿಯ ಅತ್ತಿಕುಡಿಗೆ, ಬೈರೇದೇವರು, ಬೆತ್ತದಕೊಳಲು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದ ಭೂಮಿಯಲ್ಲಿ ಹಲವು ತಿಂಗಳಿಂದ ವಿಚಿತ್ರವಾದ ಶಬ್ಧ ಕೇಳಿ ಬರುತ್ತಿದೆ. ಇಂದು ಬೆಳಗ್ಗೆ ಕೂಡ 9.40ರ ಸುಮಾರಿಗೆ ಭಾರೀ ಶಬ್ಧವಾಗಿದ್ದು, ಜನ ಆತಂಕದಲ್ಲಿ ಮನೆಯಿಂದ ಹೊರಬಂದಿದ್ದಾರೆ. ಅಲ್ಲದೇ ಭೂಮಿ ಕಂಪಿಸಿದ ಅನುಭವವದೊಂದಿಗೆ ಮನೆಯ ಪಾತ್ರೆಗಳು ಕೂಡ ಕೆಳಗೆ ಬಿದ್ದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
- Advertisement
ಭಾರೀ ಪ್ರಮಾಣದ ಶಬ್ಧದಿಂದ ಆತಂಕಕ್ಕೀಡಾಗಿರುವ ಗ್ರಾಮಸ್ಥರು ಈ ಬಗ್ಗೆ ತಾಲೂಕು ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನ ಅನ್ವಯ ಪೊಲೀಸರು ಹಾಗೂ ತಾಲೂಕು ಅಧಿಕಾರಿಗಳು ಈಗಾಗಲೇ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಶಬ್ಧಕ್ಕೆ ಕಾರಣ ತಿಳಿದುಬಂದಿಲ್ಲ.
ಸದ್ಯ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿರುವ ಗ್ರಾಮಸ್ಥರು ವಿಪತ್ತು ನಿರ್ವಹಣಾ ಇಲಾಖೆಯಿಂದ ಪರಿವೀಕ್ಷಣೆ ನಡೆಸಿ ಈ ಅಸಹಜ ಕ್ರಿಯೆಗೆ ಕಾರಣ ತಿಳಿಸಿ ಜನರ ಆತಂಕವನ್ನು ದೂರ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews