ಇತಿಹಾಸದ ಪುಟ ತೆರೆದು ನೋಡಿದರೆ ಜಪಾನ್‌ನಲ್ಲಿ (Japan) ಅದೆಷ್ಟೋ ಬಾರಿ ಭೀಕರ ಭೂಕಂಪ (Earthquake) ಹಾಗೂ ಸುನಾಮಿಗಳು (Tsunami) ಉಂಟಾಗಿವೆ. ಇಂತಹ ಪ್ರಾಕೃತಿಕ ವಿಕೋಪಗಳಿಂದ ಬಚಾವಾಗೋದು ಯಾರೊಬ್ಬರ ಕೈಯಲ್ಲೂ ಸಾಧ್ಯವಾಗದ ಮಾತು. ಜಪಾನ್‌ಗೆ ಇವೆಲ್ಲವನ್ನೂ ಎದುರಿಸೋದು ಬಿಟ್ಟರೆ ಬೇರೆ ದಾರಿಯೂ ಇಲ್ಲ. ಭೀಕರ ಭೂಕಂಪ ಹಾಗೂ ಸುನಾಮಿಯನ್ನು ಪ್ರತ್ಯಕ್ಷವಾಗಿ ನೋಡಿ, ಅನುಭವಿಸಿರೋ ಜಪಾನ್ ಇವೆಲ್ಲವನ್ನು ಹೇಗೆ ಎದುರಿಸುತ್ತೆ, ಯಾವೆಲ್ಲಾ ಕ್ರಮಗಳನ್ನು ದೇಶ ತೆಗೆದುಕೊಳ್ಳುತ್ತದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
ಕಳೆದ ಸಾವಿರ ವರ್ಷಗಳಲ್ಲಿ ಜಪಾನ್‌ನಲ್ಲಿ ನೂರಕ್ಕು ಹೆಚ್ಚು ಬಾರಿ ಸುನಾಮಿ ರುದ್ರತಾಂಡವವಾಡಿದೆ. ಇದಕ್ಕೆ ಸಿಲುಕಿ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ವರ್ಷಗಳು ಕಳೆದಂತೆ ಜಪಾನ್‌ನಲ್ಲಿ ಸುನಾಮಿಯ ಅಪಾಯ ಹೆಚ್ಚುತ್ತಲೇ ಇದೆ. ಕಳೆದ ಒಂದೇ ವರ್ಷದಲ್ಲಿ ಜಪಾನ್‌ನಲ್ಲಿ 300ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿವೆ.
ಅರ್ಥ್‌ಕ್ವೇಕ್ ಪ್ರೂಫ್ ಕಟ್ಟಡ:
ಜಪಾನ್‌ನಲ್ಲಿ ಭೂಕಂಪ ಎನ್ನೋದು ಎಷ್ಟು ಸಾಮಾನ್ಯ ಎನಿಸಿಬಿಟ್ಟಿದೆಯೆಂದರೆ ಇಲ್ಲಿನ ಪ್ರತಿ ದೈತ್ಯ ಕಟ್ಟಡಗಳನ್ನು ಕೆಲ ಮಾನದಂಡಗಳ ಅನುಗುಣವಾಗಿ ‘ಅರ್ಥ್‌ಕ್ವೇಕ್ ಪ್ರೂಫ್’ ಆಗಿ ಕಟ್ಟುವುದು ಕಡ್ಡಾಯ ಮಾಡಲಾಗಿದೆ. ಈ ಮೂಲಕ ಯಾವುದೇ ಗಳಿಗೆಯಲ್ಲಿ ಭೂಕಂಪವಾದರೂ ಆ ಕಟ್ಟಡಗಳು ಬೀಳದಂತೆ ತಡೆಯಲು ಸಾಧ್ಯವಾಗುತ್ತಿದೆ.
2011ರ ಭೀಕರ ಸುನಾಮಿ:
ಇತ್ತೀಚಿನ ಭೂಕಂಪದ ನಿದರ್ಶನಗಳನ್ನು ನೋಡೋದಾದ್ರೆ 2011ರಲ್ಲಿ ನಡೆದ ಸುನಾಮಿ ಅತ್ಯಂತ ಭೀಕರವಾಗಿತ್ತು. 2011ರ ಮಾರ್ಚ್ 11 ರಂದು ಓಶಿಕಾ ಪರ್ಯಾಯ ದ್ವೀಪದಿಂದ ಸಮುದ್ರದ 72 ಕಿ.ಮೀ ದೂರದಲ್ಲಿ ಬರೋಬ್ಬರಿ 9.1 ತೀವ್ರತೆಯ ಭೂಕಂಪ ಉಂಟಾಗಿತ್ತು. ಇದು 6 ನಿಮಿಷಗಳ ವರೆಗೆ ಮುಂದುವರಿದು ಭೀಕರ ಸುನಾಮಿಯನ್ನು ಹುಟ್ಟಿಸಿತು. ಇದು ಇಲ್ಲಿವರೆಗೆ ದಾಖಲಿಸಲಾದ ವಿಶ್ವದ 4ನೇ ಅತ್ಯಂತ ದೊಡ್ಡ ಭೂಕಂಪವೂ ಎನಿಸಿಕೊಂಡಿತ್ತು. ಇದರ ಅಲೆಯೇ ಬರೋಬ್ಬರಿ 180 ಅಡಿಗಳಷ್ಟು ಎತ್ತರವಾಗಿತ್ತು ಮಾತ್ರವಲ್ಲದೇ ಜಪಾನ್ ಭೂಪ್ರದೇಶದ 10 ಕಿ.ಮೀ ದೂರದವರೆಗೂ ತಲುಪಿತ್ತು.
ಕೊನೆ ಗಳಿಗೆಯಲ್ಲಿ ಜನತೆಗೆ ಎಚ್ಚರಿಕೆ:
ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಇಲ್ಲಿಯವರೆಗೆ ಭೂಕಂಪ ಯಾವಾಗ, ಎಲ್ಲಿ, ಎಷ್ಟು ತೀವ್ರವಾಗಿ ಸಂಭವಿಸಬಹುದು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. 2011ರಲ್ಲಿ ನಡೆದ ಭಯಾನಕ ಭೂಕಂಪದ ವೇಳೆ ಜಪಾನ್ ಕರಾವಳಿ ಭಾಗ ಸಂಡೈನ ನಿವಾಸಿಗಳಿಗೆ ಕೇವಲ 8 ನಿಮಿಷಗಳ ಮೊದಲು ಈ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಸಾವಿರಾರು ಜನರಿಗೆ ಇದರಿಂದ ತಪ್ಪಿಸಿಕೊಂಡು ಓಡಿ ಹೋಗಲು ಅವಕಾಶವೂ ಸಿಕ್ಕಿರಲಿಲ್ಲ. ಈ ಮಾರಣಾಂತಿಕ ಸುನಾಮಿಯಿಂದಾಗಿ 18 ಸಾವಿರಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು.
ಜಪಾನ್‌ನಲ್ಲಿ ಹೆಚ್ಚು ಭೂಕಂಪ ಯಾಕೆ?
ಇಷ್ಟಕ್ಕೂ ಜಪಾನ್‌ನಲ್ಲಿ ಸಂಭವಿಸೋ ಭೂಕಂಪಕ್ಕೆ ಮುಖ್ಯ ಕಾರಣ ಅದಿರುವ ಸ್ಥಳ. ಪೆಸಿಫಿಕ್ ಸಾಗರದ ಸುತ್ತಲಿರುವ ಪ್ರದೇಶದಲ್ಲಿ ಭೂಮಿಯಲ್ಲಿಯೇ ಅತಿ ಹೆಚ್ಚು ಭೂಕಂಪ, ಜ್ವಾಲಾಮುಖಿ ಸ್ಫೋಟ ಹಾಗೂ ಸುನಾಮಿ ಉಂಟಾಗೋ ಸ್ಥಳವಾಗಿದೆ. ಭೂಗೋಳದಲ್ಲಿ ನೋಡಹೋದರೆ ಈ ಪ್ರದೇಶ ಉಂಗುರಾಕಾರದಲ್ಲಿ ಕಂಡುಬರುತ್ತದೆ. ಹೀಗಾಗಿ ಈ ಪ್ರದೇಶಕ್ಕೆ ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗುತ್ತದೆ. ಇಂತಹ ಪ್ರದೇಶದ ಬಳಿಯಲ್ಲಿಯೇ ಜಪಾನ್ ಇರುವುದರಿಂದ ಅಲ್ಲಿ ಅತಿ ಹೆಚ್ಚು ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತದೆ. ಇದನ್ನೂ ಓದಿ: 6 ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ನೇಪಾಳದಲ್ಲಿ ನಾಪತ್ತೆ
ಸಮುದ್ರ ಗೋಡೆಗಳು:
ಜಪಾನ್ ತನ್ನ ಹೈರಿಸ್ಕ್ ಏರಿಯಾಗಳನ್ನು ಸುನಾಮಿಯಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಕರಾವಳಿ ಭಾಗಗಳಲ್ಲಿ ಸಮುದ್ರ ಗೋಡೆಗಳನ್ನು (Sea Wall) ನಿರ್ಮಿಸಿದೆ. ಇದು ಇತ್ತೀಚಿನ ರಕ್ಷಣಾ ವಿಧಾನವಾಗಿರದೇ ಹಲವು ವರ್ಷಗಳಿಂದಲೇ ಜಪಾನ್ ಕರಾವಳಿ ತೀರದ ಭಾಗವೆನಿಸಿಕೊಂಡಿದೆ. ನೂರಾರು ವರ್ಷಗಳ ಹಿಂದೆ ಜಪಾನ್‌ನ ಸಣ್ಣ ಹಳ್ಳಿಯೊಂದರಲ್ಲಿ 2.4 ಕಿ.ಮೀ ಉದ್ದದ ಹಾಗೂ 10 ಮೀಟರ್ ಎತ್ತರದ ಗೋಡೆಯನ್ನು ಕರಾವಳಿಯುದ್ದಕ್ಕು ನಿರ್ಮಿಸಲಾಯಿತು. ಇದು ಸಮುದ್ರದ ಭಾರೀ ಅಲೆಗಳನ್ನು ತಡೆದು ನಿವಾಸಿಗಳನ್ನು ರಕ್ಷಿಸಿತು. ಇದಾದ ಬಳಿಕ ಜಪಾನ್‌ನ ಇತರ ಕರಾವಳಿ ಪ್ರದೇಶಗಳಲ್ಲೂ ಇದೇ ರೀತಿಯ ದೈತ್ಯ ಗೋಡೆಗಳನ್ನು ನಿರ್ಮಿಸಲಾಯಿತು. ಆದರೆ 2011ರಲ್ಲಿ ಸಂಭವಿಸಿದ ಸುನಾಮಿ ಈ ಗೋಡೆಗಳನ್ನೂ ಮೀರಿ ಅತ್ಯಂತ ಎತ್ತರದಿಂದ ಅಪ್ಪಳಿಸಿದ್ದರಿಂದ ಆಸ್ತಿ-ಪಾಸ್ತಿ ನಾಶ ಹಾಗೂ ಸಾವು-ನೋವುಗಳಿಗೆ ಕಾರಣವಾಯಿತು. ಹಲವೆಡೆ 10 ಮೀಟರ್ ಎತ್ತರದ ಈ ಗೋಡೆಗಳೂ ನಾಶವಾದವು. 2011ರ ಬಳಿಕ ಅಲ್ಲಿನ ಸರ್ಕಾರ ಪೂರ್ವ ಕರಾವಳಿ ಭಾಗದಲ್ಲಿ 400 ಕಿ.ಮೀ ಉದ್ದದ ಹಾಗೂ 15 ಮೀ. ಎತ್ತರದ ಮತ್ತಷ್ಟು ಸದೃಢ ಗೋಡೆಯನ್ನು ನಿರ್ಮಿಸಲು ನಿರ್ಧರಿಸಿತು.
‘ಸೀ ವಾಲ್’ ವಿನ್ಯಾಸ ಬದಲಾವಣೆ:
ಭಯಾನಕ ಘಟನೆಯ ನಂತರ ಹಲವು ಸಂಶೋಧನೆಗಳಿಂದ ನೇರವಾದ ಗೋಡೆಗಳನ್ನು ನಿರ್ಮಿಸುವುದರಿಂದ ಅಲೆಗಳು ರಭಸವಾಗಿ ಅದಕ್ಕೆ ಡಿಕ್ಕಿ ಹೊಡೆಯುತ್ತವೆ ಹಾಗೂ ಹೆಚ್ಚಿನ ಒತ್ತಡ ಹಾಕುವುದರ ಮೂಲಕ ಅಲೆಗಳು ಮತ್ತಷ್ಟು ಎತ್ತರಕ್ಕೆ ಸಾಗಿ ಗೋಡೆಗಳನ್ನು ದಾಟುತ್ತವೆ ಎಂಬುದು ತಿಳಿದುಬಂತು. ಈ ಸಂಶೊಧನೆಯ ಬಳಿಕ ಸಮುದ್ರ ಗೋಡೆಗಳನ್ನು ಇದೀಗ ನೇರವಾಗಿ ನಿರ್ಮಿಸೋ ಬದಲು ಡೊಂಕಾದ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತಿದೆ. ಇದು ಅಲೆಗಳು ಗೋಡೆಗೆ ಅಪ್ಪಳಿಸಿದಾಗ ಇದರ ಡೊಂಕಾದ ವಿನ್ಯಾಸ ನೀರನ್ನು ಯೂಟರ್ನ್ ಹೊಡೆಯುವಂತೆ ಮಾಡುತ್ತದೆ. ಹೀಗೆ ಯೂಟರ್ನ್ ಹೊಡೆದ ಒಂದು ಅಲೆ ಹಿಂದಿನಿಂದ ಬರುವ ಮತ್ತೊಂದು ಅಲೆಯ ಬಲವನ್ನು ಕುಗ್ಗಿಸುತ್ತದೆ. ಇನ್ನೂ ಹಲವು ಕರಾವಳಿ ಭಾಗಗಳಲ್ಲಿ ಈ ದೈತ್ಯ ಗೋಡೆಗಳನ್ನು ನಿರ್ಮಿಸುವ ಬದಲು ಬ್ರೇಕ್ ವಾಟರ್‌ಗಳೆಂಬ ಇತರ ವಿಧಾನಗಳನ್ನೂ ಅನುಸರಿಸಲಾಗುತ್ತಿದೆ. ಇದನ್ನೂ ಓದಿ: ರಾಂಗ್ ರೂಟ್‌ನಲ್ಲಿ ಬಂದ ಶಾಲಾ ಬಸ್‌ನಿಂದ ಕಾರಿಗೆ ಡಿಕ್ಕಿ – ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಸಾವು
ಇಂತದ ದೈತ್ಯ ಗೋಡೆಗಳಿದ್ದರೂ ಜಪಾನ್‌ನಲ್ಲಿ ಸುನಾಮಿಯ ಭೀತಿ ಎಂದೂ ಕಡಿಮೆಯಾಗಿಲ್ಲ. ಇನ್ನಷ್ಟು ಭೀಕರ ಸುನಾಮಿಗಳು ಮುಂದೆ ಹುಟ್ಟಿಕೊಂಡರೆ ಈ ಗೋಡೆಗಳೂ ಅವನ್ನು ಮೆಟ್ಟಿಸಲು ಸಾಧ್ಯವಾಗುವುದಿಲ್ಲ ಎಂಬ ಯೋಚನೆಯನ್ನು ದೇಶ ಈಗಾಗಲೇ ಮಾಡಿದೆ. ಒಂದು ವೇಳೆ ಅಂತಹ ಅನಾಹುತವಾದರೆ ಅದನ್ನು ತಡೆಯಲು ಮತ್ತೊಂದು ಉಪಾಯವನ್ನೂ ದೇಶ ಮಾಡಿದೆ. ಹಲವು ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳನ್ನು ನಿರ್ಮಿಸಲಾಗಿದೆ. ಒಂದು ವೇಳೆ ದೈತ್ಯ ಗೋಡೆಗಳನ್ನು ಮೀರಿ ಸುನಾಮಿ ಅಪ್ಪಳಿಸಿದರೆ ಈ ಕಾಡುಗಳು ಆ ಅಲೆಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೇ ಅಲೆಗಳು ವಾಪಸ್ ಸಮುದ್ರ ಸೇರುವ ಸಂದರ್ಭ ತನ್ನೊಂದಿಗೆ ವಸ್ತುಗಳನ್ನು ಹೊತ್ತೊಯ್ಯುವುದನ್ನು ಇದು ತಡೆಯಲು ಸಹಾಯ ಮಾಡುತ್ತದೆ.
ತನ್ನನ್ನು ತಾನು ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಜಪಾನ್ ಎಲ್ಲಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಜಾಗತಿಕ ತಾಪಮಾನದಿಂದಾಗಿ ದಿನಕಳೆದಂತೆ ಸಮುದ್ರಮಟ್ಟ ಎತ್ತರಕ್ಕೇರುತ್ತಲೇ ಇದೆ. ಭೂಕಂಪಗಳು ಅಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಭೀಕರ ಸುನಾಮಿಯಿಂದ ರಕ್ಷಿಸಿಕೊಳ್ಳಲು ಈ ಸೀ ವಾಲ್‌ಗಳು ಶಾಶ್ವತ ಪರಿಹಾರ ಅಲ್ಲ ಎಂಬುದು ತಿಳಿದಿದ್ದರೂ ಜಪಾನ್ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಈ ವ್ಯವಸ್ಥೆಗಳನ್ನು ಮಾಡಿದೆ. ಇದರಿಂದ ಕನಿಷ್ಟಪಕ್ಷ ಜನತೆ ಅಲ್ಲಿಂದ ತಪ್ಪಿಸಿಕೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸ್ವಲ್ಪ ಸಮಯವಾದರೂ ಸಿಗುತ್ತದೆ ಎಂಬುದು ಅಲ್ಲಿನ ಅಭಿಪ್ರಾಯ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]