ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಗೆ (Charmadi Ghat) ಆಯಸ್ಸು ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಯಾಕೆಂದರೆ ಮುಂಗಾರು ಮಳೆ ಇಡೀ ಮಲೆನಾಡಿಗೆ ಕೈಕೊಟ್ಟಿದ್ದರು ಕೂಡ ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಕೊರತೆ ಉಂಟಾಗಿರಲಿಲ್ಲ. ಅದರಲ್ಲೂ ಕಳೆದ 15 ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಐದಾರು ಕಡೆ ಭೂಮಿ ಬಾಯ್ಬಿಟ್ಟಿದ್ದು ರಸ್ತೆಯ ತಡೆಗೋಡೆಗಳು ಕೂಡ ಬಿರುಕು ಬಿಟ್ಟಿವೆ.
ಚಾರ್ಮಾಡಿ ಘಾಟಿ ಬದುಕಿನ ದಾರಿಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಹತ್ತಾರು ಅಂಬುಲೆನ್ಸ್ ಗಳು ರೋಗಿಗಳನ್ನ ಹೊತ್ತು ಉಡುಪಿ ಹಾಗೂ ಮಂಗಳೂರಿಗೆ ಹೋಗುತ್ತವೆ. ಹಣ್ಣು-ತರಕಾರಿಗಳು ಗಾಡಿಗಳು, ಓದಲು ಸಲುವಾಗಿ ಮಕ್ಕಳು ಕೂಡ ಈ ಮಾರ್ಗವನ್ನೇ ಆಶ್ರಯಿಸಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಚಾರ್ಮಾಡಿ ತನ್ನ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. 15 ದಿನಗಳ ನಿರಂತರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಭೂಮಿ ಬಾಯ್ಬಿಟ್ಟಿದ್ದು ತಡೆಗೋಡೆಗಳು ಕೂಡ ಬಿರುಕು ಬಿಟ್ಟಿವೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಆತಂಕದಲ್ಲಿ ಪ್ರಯಾಣ ಮಾಡುವಂತಾಗಿದೆ. ಇದನ್ನೂ ಓದಿ: ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟು- ಪ್ರಯಾಣಿಕರು 12 ಗಂಟೆ ವಿಮಾನದಲ್ಲೇ ಲಾಕ್
2019 ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ರಸ್ತೆ ಸುಮಾರು 200-300 ಅಡಿ ಆಳಕ್ಕೆ ಕುಸಿದಿತ್ತು. ಅಷ್ಟು ಆಳದಿಂದಲೂ ಕೂಡ ಕಾಂಕ್ರೀಟ್ ವಾಲ್ ನಿರ್ಮಿಸಿ ರಸ್ತೆಗೆ ಬಂದೋಬಸ್ತ್ ಮಾಡಿದ್ದರು. ಆದರೆ ಆ ಕಾಂಕ್ರೀಟ್ ವಾಲ್ ಕೂಡ ಜರುಗಿದ್ದು ರಸ್ತೆ ಕೂಡ ಬಾಯ್ಬಿಟ್ಟಿದೆ. ಇದರಿಂದ ಚಾರ್ಮಾಡಿ ಘಾಟ್ ವರ್ಷದಿಂದ ವರ್ಷಕ್ಕೆ ಕ್ರಮೇಣ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.
2019ರಲ್ಲಿ 8 ತಿಂಗಳು ಚಾರ್ಮಾಡಿ ಘಾಟಿಯನ್ನು ಬಂದ್ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಿದ್ದ ಕಾಮಗಾರಿ ಕಳಪೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಚಾರ್ಮಾಡಿ ಘಾಟಿಯಲ್ಲಿ ಮೂರ್ನಾಲ್ಕು ಕಡೆ ಭೂಮಿ ಬಾಯ್ಬಿಟ್ಟಿದ್ದು ಸ್ಥಳೀಯರು ಹಾಗೂ ಪ್ರಯಾಣಿಕರು ಈ ಮಾರ್ಗದಲ್ಲಿ 10 ಚಕ್ರದ ಲಾರಿಗಳು, ಅದಕ್ಕಿಂತ ದೊಡ್ಡ ವಾಹನಗಳು ಹಾಗೂ ಭಾರೀ ಗಾತ್ರದ ವಾಹನಗಳಿಗೆ ಸಂಪೂರ್ಣ ಬ್ರೇಕ್ ಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.