ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿರುವ ದಳಪತಿ ವಿಜಯ್ (Vijay Thalapathy) ಬಗ್ಗೆ ನಟ ಕಮ್ ನಿರ್ದೇಶಕ ಸಮುದ್ರಕನಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ರಾಜಕೀಯ ಎಂಟ್ರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಪಕ್ಕದಲ್ಲಿ ನಡೆಯಲು ಉತ್ಸುಕನಾಗಿದ್ದೇನೆ ಎಂದು ಸಮುದ್ರಕನಿ (Samuthirakani) ವಿಜಯ್ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕುಟುಕಿದ ಜಗ್ಗೇಶ್‌ಗೆ ಕಾಲಾಯ ತಸ್ಮೈ ನಮಃ ಎಂದ ವರ್ತೂರು ಸಂತೋಷ್
2 ವಾರಗಳ ಹಿಂದೆ ವಿಜಯ್ ‘ತಮಿಳಿಗ ವೆಟ್ರಿ ಕಳಗಂ’ ಎಂದು ತಮ್ಮ ಪಕ್ಷದ ಹೆಸರನ್ನು ಘೋಷಿಸುವ ಮೂಲಕ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಬಿಟ್ಟು ಜನಸೇವೆ ಮಾಡಲು ನಿರ್ಧರಿಸಿರುವ ವಿಜಯ್‌ಗೆ ತಲೈವಾ ಸೇರಿದಂತೆ ಅನೇಕರು ಅಭಿನಂದನೆ ತಿಳಿಸಿದ್ದಾರೆ. ಈ ಬೆನ್ನಲ್ಲೇ ಸಮುದ್ರಕನಿ ಕೂಡ ವಿಜಯ್ ಬಗ್ಗೆ ಮಾತನಾಡಿದ್ದಾರೆ.
ವಿಜಯ್ ತುಂಬಾ ಒಳ್ಳೆಯ ವ್ಯಕ್ತಿ. ಅವರ ಕೆಲಸಕ್ಕೆ ಸದಾ ನನ್ನ ಬೆಂಬಲ ಇರುತ್ತದೆ. ಅವರೊಂದಿಗೆ ಸೇರಿ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೂ ಅವರು ನನ್ನನ್ನು ಪ್ರಚಾರಕ್ಕೆ ಕರೆಯಲಿಲ್ಲ. ಒಳ್ಳೆಯ ಕೆಲಸಕ್ಕೆ ನಾನು ಮೊದಲು ಹೋಗುತ್ತೇನೆ. ಅವರ ಗೆಲುವಿಗಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಬಳಿಕ ವಿಜಯ್ ಹೊಸ ಹೆಜ್ಜೆಗೆ ಸಮುದ್ರಕನಿ ಶುಭಕೋರಿದ್ದಾರೆ.
ನನ್ನ ಮಟ್ಟಿಗೆ, ರಾಜಕೀಯವು ಕೇವಲ ಇನ್ನೋಂದು ವೃತ್ತಿಯಲ್ಲ. ಇದು ಜನರಿಗೆ ಮಾಡುವ ಪವಿತ್ರ ಸೇವೆ ಎಂದಿದ್ದಾರೆ ಸಮುದ್ರಕನಿ. ಪಕ್ಷದ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ನಾನು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರೈಸಿದ ನಂತರ ಜನರ ಸೇವೆಗಾಗಿ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ಇದು ತಮಿಳುನಾಡಿನ ಜನತೆಗೆ ನನ್ನ ಕೃತಜ್ಞತೆ ಮತ್ತು ಕರ್ತವ್ಯ ಎಂದು ನಾನು ಪರಿಗಣಿಸುತ್ತೇನೆ ಎಂದು ಸಮುದ್ರಕನಿ ರಾಜಕೀಯಕ್ಕೆ ಬರುವ ಬಗ್ಗೆಯೂ ಮಾತನಾಡಿದ್ದಾರೆ.
ಇದೀಗ ವಿಜಯ್ ಪರ ಸಮುದ್ರಕನಿ ಮಾತನಾಡುತ್ತಿದ್ದಂತೆ ವಿಜಯ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದೇ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಇದನ್ನೂ ಓದಿ:ನಟಿ ರಶ್ಮಿಕಾ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ
ಸಾಕಷ್ಟು ಸಮಯದಿಂದ ವಿಜಯ್ ದಳಪತಿ ಅವರು ರಾಜಕೀಯಕ್ಕೆ ಬರುವ ಬಗ್ಗೆ ಚಾಲ್ತಿಯಲ್ಲಿತ್ತು. ಯಾವ ಪಕ್ಷಕ್ಕೆ ಸೇರಬಹುದು ಎಂದು ಭಾರೀ ಚರ್ಚೆಯಾಗಿತ್ತು. ಇದೀಗ ತಮ್ಮದೇ ಪಕ್ಷ ಕಟ್ಟಿ ಈ ಮೂಲಕ ಜನಸೇವೆ ಮಾಡಲು ವಿಜಯ್ ಮುಂದಾಗಿದ್ದಾರೆ. 2026ರ ವಿಧಾನಸಭಾ ಚುನಾವಣೆಗೆ ವಿಜಯ್ ಪಕ್ಷ ಸ್ಪರ್ಧೆಗೆ ಇಳಿಯಲಿದೆ.