ಬೆಂಗಳೂರು: ಗ್ರಾಮ ಪಂಚಾಯತ್‌ಗಳಲ್ಲಿ ಕಳೆದೊಂದು ವರ್ಷದಿಂದ ಸ್ಥಗಿತವಾಗಿದ್ದ 11ಬಿ ಖಾತೆ ವಿತರಣೆ ಹಾಗೂ ನಿವೇಶನ ನೋಂದಣಿ ಇಂದಿನಿಂದ ಪುನಾರಂಭವಾಗಿದೆ. ಇದಕ್ಕಾಗಿ ಸುಧಾರಿತಗೊಳಿಸಿದ ಇ-ಸ್ವತ್ತು 2.0 (E-Swathu) ತಂತ್ರಾಂಶಕ್ಕೆ ವಿಧಾನಸೌಧದಲ್ಲಿಂದು ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಚಾಲನೆ ನೀಡಿದರು.
ಈಗ ಚಾಲನೆಗೆ ಬರುತ್ತಿರುವ ಇ-ಸ್ವತ್ತು 2.0 ತಂತ್ರಾಂಶದಲ್ಲಿ 11 ಬಿ ಖಾತೆ ಪಡೆಯಲು ಏಪ್ರಿಲ್ 7, 2025 ರ ಹಿಂದೆ ನಿವೇಶನ ನೋಂದಣಿಯಾಗಿದ್ದರೆ ಅಥವಾ ಮನೆ ನಿರ್ಮಿಸಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಇ-ಸ್ವತ್ತು ತಂತ್ರಾಂಶದ ಮೂಲಕ 11 ಬಿ ಖಾತೆ ಪಡೆಯಲು ಅರ್ಜಿ ಸಲ್ಲಿಕೆಗೆ ಮೂರು ತಿಂಗಳ ಕಾಲವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಇ-ಸ್ಟ್ಯಾಂಪ್‌ಗೆ ಗುಡ್ ಬೈ – ಇನ್ಮುಂದೆ ಕರ್ನಾಟಕದಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್
ಅರ್ಜಿ ಸಲ್ಲಿಕೆ ಇಂದಿನಿಂದಲೇ ಪುನರಾರಂಭವಾಗಲಿದ್ದು, ಇನ್ಮುಂದೆ ಪಂಚಾಯಿತಿಗಳಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ 11ಬಿ ಖಾತೆ ಪಡೆಯಬಹುದಾಗಿದೆ. ಅಕ್ರಮ ಕಾರಣಕ್ಕಾಗಿ ವರ್ಷದ ಹಿಂದೆ ಪಂಚಾಯಿತಿಗಳಲ್ಲಿ 11ಬಿ ಖಾತೆ ನೀಡಲು ಹಾಗೂ ನಿವೇಶನ ನೋಂದಣಿಯನ್ನು ರದ್ದುಗೊಳಿಸಲಾಗಿತ್ತು.
ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೇ ನಿರ್ಮಾಣವಾಗಿದ್ದ ಬಡಾವಣೆಗಳಲ್ಲಿನ ನಿವೇಶನಗಳಿಗೆ 11ಬಿ ಖಾತೆ ಪಡೆಯಲು ಜಾತಕ ಪಕ್ಷಿಗಳಂತೆ ಕಾದುಕುಳಿತಿದ್ದ ನಿವೇಶನದಾರರಿಗೆ ಕೊನೆಗೂ ಮುಕ್ತಿ ದೊರೆತಿದೆ.

