ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಮತ್ತು ಕನ್ನಡ ಭಾಷೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕೆಲಸಗಳು ನಡೆದಿದ್ದು, ಇಂತಹ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವ ‘ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರಮ 2017ರ ಮಾರ್ಚ್ 5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಣಜ’ ಜ್ಞಾನಕೋಶ ಹಾಗೂ ಇಜ್ಞಾನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿವೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಹಲವು ಚಟುವಟಿಕೆಗಳು ನಡೆಯುತ್ತಿವೆಯಾದರೂ ಅವುಗಳ ಪರಿಚಯ ಎಲ್ಲರಿಗೂ ಇರುವುದಿಲ್ಲ. ಈ ಕೊರತೆಯನ್ನು ಕೊಂಚಮಟ್ಟಿಗಾದರೂ ನಿವಾರಿಸುವ ಉದ್ದೇಶದಿಂದ ಈ ಪ್ರಾತಿನಿಧಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
Advertisement
ಕನ್ನಡದ ಮಟ್ಟಿಗೆ ವಿಶಿಷ್ಟ ಎನ್ನಬಹುದಾದ ಈ ಪ್ರದರ್ಶನವನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಉದ್ಘಾಟಿಸಲಾಗುವುದು. ಮಧ್ಯಾಹ್ನ 2:30ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಕನ್ನಡದ ವಿವಿಧ ತಂತ್ರಾಂಶಗಳು, ಮೊಬೈಲ್ ಆಪ್‍ಗಳು, ಜಾಲತಾಣಗಳು ಹಾಗೂ ತಂತ್ರಜ್ಞ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
Advertisement
ಈ ಪ್ರದರ್ಶನವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರಲಿದ್ದು ಅವರು ಯಾವುದೇ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಪ್ರದರ್ಶನದ ಅವಧಿಯಲ್ಲೇ ಕನ್ನಡ ಮತ್ತು ತಂತ್ರಜ್ಞಾನ ಕುರಿತ ಭಾಷಣ-ಸಂವಾದ ಕಾರ್ಯಕ್ರಮಗಳೂ ನಡೆಯಲಿವೆ.
Advertisement
ಆಯೋಜಕರ ಕುರಿತು:
* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ ‘ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶ ಪ್ರಪಂಚದ ಎಲ್ಲ ಪ್ರಕಾರಗಳ ಮಾಹಿತಿಯನ್ನೂ ಕನ್ನಡ ಭಾಷೆಯಲ್ಲಿ ಮುಕ್ತವಾಗಿ ಒದಗಿಸುವ ಉದ್ದೇಶ ಹೊಂದಿದೆ. ಪುಸ್ತಕ, ಪತ್ರಿಕೆ, ಲೇಖನಗಳು, ಅಂಕಣ ಬರಹ, ನಿಘಂಟು, ಚಿತ್ರಗಳು – ಹೀಗೆ ವಿವಿಧ ರೂಪಗಳ ಕನ್ನಡ ಮಾಹಿತಿಯನ್ನು ಈ ತಾಣ ಕನ್ನಡದ ಓದುಗರಿಗೆ ಒದಗಿಸುತ್ತಿದೆ.
Advertisement
* ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ‘ಇಜ್ಞಾನ ಡಾಟ್ ಕಾಮ್’ ಜಾಲತಾಣವನ್ನು ನಿರ್ವಹಿಸುತ್ತಿದೆ. ಪುಸ್ತಕ, ಲೇಖನ, ಅಂಕಣಬರಹಗಳ ಮೂಲಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಮಾಹಿತಿಯನ್ನು 2007ರಿಂದ ಕನ್ನಡದ ಓದುಗರಿಗೆ ನೀಡುತ್ತ ಬಂದಿರುವ ಹೆಗ್ಗಳಿಕೆ ಈ ತಾಣದ್ದು. ಜಾಲತಾಣದ ಜೊತೆಗೆ ಮೊಬೈಲ್ ಆಪ್‍ಗಳ ಮೂಲಕವೂ ಈ ಮಾಹಿತಿ ಓದುಗರನ್ನು ತಲುಪುತ್ತಿದೆ.