ನವದೆಹಲಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ನ್ಯಾ, ಉದಯ ಲಲಿತ್, ನ್ಯಾ ಆದರ್ಶಕುಮಾರ್ ನೇತೃತ್ವದ ದ್ವಿಸದಸ್ಯ ಪೀಠದಿಂದ ಮಹತ್ವದ ತೀರ್ಪು ಹೊರಬಿದ್ದಿದೆ.
Advertisement
ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸಿ ಸಚಿವ ಕೆ ಜಿ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಐಜಿ ಪ್ರಣಬ್ ಮೊಹಂತಿ, ಎಎನ್‍ಎಸ್ ಪ್ರಸಾದ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಈಗ ಸಿಬಿಐಗೆ ವಹಿಸಿದ ಕಾರಣ ಇವರಿಗೆ ಸಂಕಷ್ಟ ಎದುರಾಗಿದೆ.
Advertisement
ಏನಿದು ಪ್ರಕರಣ?: 2016 ಜುಲೈ 7 ರಂದು ಡಿವೈಎಸ್ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿತ್ತು.
Advertisement
ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆ ಗಣಪತಿ ತಂದೆ ಕುಶಾಲಪ್ಪ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು.
Advertisement
ತಕರಾರು ಅರ್ಜಿ ಸಲ್ಲಿಸಿರಲಿಲ್ಲ: ಸಚಿವ ಜಾರ್ಜ್ ಅವರಿಗೆ ಸಿಐಡಿ ನೀಡಿರುವ ಬಿ ರಿಪೋರ್ಟ್ ಅನ್ನು ಗಣಪತಿ ಅವರ ಪುತ್ರ ನೇಹಾಲ್ ಒಪ್ಪಿಕೊಂಡಿದ್ದರು. ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್ ಗೆ ಗಣಪತಿ ಪುತ್ರ ಯಾವುದೇ ತಕರಾರು ಅರ್ಜಿ ಸಲ್ಲಿಸಿರಲಿಲ್ಲ.
ದಾಖಲೆಗಳು ನಾಶ: ಗಣಪತಿ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ ಉಲ್ಲೇಖ ಇರುವುದನ್ನು ಬಹಿರಂಗಪಡಿಸಿತ್ತು. ಆತ್ಮಹತ್ಯೆ ಮಾಡಿಕೊಂಡ ದಿನಾಂಕದ ಬಳಿಕ ಹಾಲಿ ಮಂತ್ರಿ, ಮಾಜಿ ಮಂತ್ರಿ, ಹಾಲಿ ಶಾಸಕರು, ಕೇಂದ್ರ ಸಚಿವರ ಸಂಬಂಧಿ, ಮುಖಂಡರು, ಇಬ್ಬರು ಪೊಲೀಸ್ ಅಧಿಕಾರಿಗಳ ಕರೆ ದಾಖಲೆ, ಮೊಬೈಲ್ ದಾಖಲೆ ನಾಶ ಮಾಡಿರುವುದು ಹಾಗೂ ಕಂಪ್ಯೂಟರ್ ದಾಖಲೆ ನಾಶ ಮಾಡಿರೋದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಐಡಿ ಫೊರೆನ್ಸಿಕ್ ವರದಿಯನ್ನು ತನಿಖೆ ವೇಳೆ ಪರಿಗಣಿಸಿದೇ ಸಚಿವ ಜಾರ್ಜ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚೀಟ್ ನೀಡಿದೆ. ಈ ವೇಳೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳನ್ನು ವಾಹಿನಿ ಮಾತನಾಡಿಸಿತ್ತು. ಜಗನ್ ಬೆಳ್ಳಿಯಪ್ಪ ಮಾತನಾಡಿ, ಪೊಲೀಸ್ ಅಧಿಕಾರಿಗಳು ನಮ್ಮ ಜೊತೆ ಜಾಸ್ತಿ ಪ್ರಶ್ನೆ ಕೇಳಿಲ್ಲ. ಕೆಲ ಪ್ರಶ್ನೆ ಕೇಳಿದರು. ಏನು ಪ್ರಶ್ನೆ ಕೇಳಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕೊನೆಗೆ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಹಾಕಲು ಹೇಳಿದರು. ನಾವು ಸಹಿ ಹಾಕಿದ್ವಿ ಎಂದು ತಿಳಿಸಿದ್ದಾರೆ.
ಏನೇನು ಡಿಲೀಟ್ ಆಗಿದೆ?: 100 ಇಮೇಲ್, 2699 ವರ್ಡ್ ಫೈಲ್, 910 ಎಂಎಸ್ ಎಕ್ಸೆಲ್ ಫೈಲ್, 145 ಪಿಡಿಎಫ್ ಫೈಲ್, 2500 ಇಮೇಜ್ ಫೈಲ್, 331 ಪಿಪಿಟಿ ಫೈಲ್, 791 ಟೆಕ್ಸ್ಟ್ ಫೈಲ್, 352 ಕಾಂಟಾಕ್ಟ್ , 52 ಮೆಸೇಜ್‍ಗಳು ಡಿಲೀಟ್ ಆಗಿದೆ ಎಂದು ವಾಹಿನಿ ವರದಿ ಪ್ರಸಾರಿಸಿತ್ತು.
https://www.youtube.com/watch?v=p2V1xEclj3g
https://www.youtube.com/watch?v=AGmp1M_0q2s