ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದ್ದು ಎಸಿಬಿ, ಸಿಐಡಿಗಳ ದುರ್ಬಳಕೆಗೆ ಸಾಕ್ಷಿಗಳು ಸಿಕ್ಕಿವೆ. ಗಣಪತಿ ಸಾವಿನ ಕೇಸ್‍ನಲ್ಲಿ ಸಿಐಡಿ ತನಿಖೆ ಸರಿಯಾಗಿ ಆಗಿಲ್ಲ. ಪೋನ್ ಕಾಲ್‍ಗಳು, ಮೆಸೇಜ್‍ಗಳು, ಡಾಕ್ಯೂಮೆಂಟ್‍ಗಳು,ಫೋಟೋಗಳು ನಾಪತ್ತೆಯಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಕ್ಷ್ಯ ನಾಶಪಡಿಸುವಲ್ಲಿ ಗೃಹ ಸಚಿವಾಲಯದ ಸಲಹೆಗಾರ ಕೆಂಪಯ್ಯ ಪಾತ್ರ ಇದೆ. ಅಷ್ಟೇ ಅಲ್ಲ ಆಡಳಿತ ಪಕ್ಷದ ಕೆಲ ನಾಯಕರ ಕೈವಾಡ ಸಹ ಇದೆ. ಜಾರ್ಜ್ ರಾಜೀನಾಮೆ ನೀಡಿದ್ರೂ ಮತ್ತೆ ತರಾತುರಿಯಲ್ಲಿ ಸಂಪುಟಕ್ಕೆ ಸೇರಿಕೊಂಡಿದ್ದಾರೆ. ಈ ಸಾಕ್ಷಿ ನಾಶದ ಹಿಂದೆ ಆಡಳಿತ ಪಕ್ಷದ ಮುಖಂಡರ ಪ್ರಭಾವ ಇದೆ ಎಂದು ಬಿಎಸ್‍ವೈ ಅವರು ಆರೋಪಿಸಿದರು.
Advertisement
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಾಟಕೀಯ. ತನಿಖೆಯನ್ನು ಸಿಐಡಿ ಸರ್ಕಾರದ ಇಚ್ಛೆಗೆ ತಕ್ಕಂತೆ ನಡೆಸಿದೆ. ವಿಧಿವಿಜ್ಞಾನ ಪ್ರಯೋಗಾಲಯ ಮೂಲಕ ಈ ಸತ್ಯ ಬಹಿರಂಗವಾಗಿದೆ. ಪ್ರಕರಣ ಕುರಿತು ದೊರೆತಿದ್ದ ಸಾಕ್ಷ್ಯಗಳು ನಾಶವಾಗಿವೆ. ಆರೋಪ ಕೇಳಿ ಬಂದ ನಾಯಕರನ್ನು ರಕ್ಷಿಸಲು ಪ್ರಮುಖ ದಾಖಲೆಗಳನ್ನು ನಾಶಮಾಡಲಾಗಿದೆ. ಈ ಸಾಕ್ಷ್ಯ ನಾಶ ಕುರಿತು ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
Advertisement
ಪ್ರಕರಣ ಮುಚ್ಚಿಹಾಕಲು ಪೊಲೀಸ್ ಅಧಿಕಾರಿಗಳ ಮತ್ತು ಸರ್ಕಾರದ ನಡುವೆ ಸಂಚು ನಡೆದಿದೆ. ಈ ಎಲ್ಲ ಬೆಳವಣಿಗೆಗೆ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊರಬೇಕು. ಕೂಡಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು. ತನಿಖೆ ವೇಳೆ ಕೊಠಡಿಯಲ್ಲಿ ಮೂರು ಗುಂಡು ಹಾರಿಸಿದ್ದ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರಕರಣದಲ್ಲಿ ಸರ್ಕಾರದ ಪ್ರಭಾವಿ ನಾಯಕರ ಕೈವಾಡವಿದೆ. ಸಾಕ್ಷ್ಯ ನಾಶ ಪತ್ತೆ ಹಚ್ಚಿ ನ್ಯಾಯ ಸಿಗಬೇಕು ಅನ್ನೋದು ಬಿಜೆಪಿಯ ಕೆಲಸ ಎಂದರು.
Advertisement
ಸಾವಿಗೂ ಮುನ್ನ ಗಣಪತಿ ಪೊಲೀಸ್ ಅಧಿಕಾರಿಗಳ ಮತ್ತು ಜಾರ್ಜ್ ಹೆಸರನ್ನು ಉಲ್ಲೇಖ ಮಾಡಿದ್ದರು. ಪ್ರಾಮಾಣಿಕ ಅಧಿಕಾರಿಗಳಿಗೆ ರಾಜ್ಯದಲ್ಲಿ ಕೆಲಸ ಮಾಡದಂತೆ ವಾತಾವರಣವಿದೆ. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದವರು ಯಾರು ಎಂದು ಪತ್ತೆ ಹಚ್ಚಬೇಕು. ಸಚಿವ ಸ್ಥಾನಕ್ಕೆ ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು. ಸಿಎಂ ಮತ್ತು ಕೆಜೆ ಜಾರ್ಜ್ ರಾಜೀನಾಮೆ ನೀಡದೆ ಇದ್ದಲ್ಲಿ ಬಿಜೆಪಿಯಿಂದ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಜಾರ್ಜ್ ರಾಜೀನಾಮೆ ನೀಡದೇ ಇದ್ದರೆ ಆ.26 ರಂದು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಪ್ರಕರಣ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತೇವೆ.
Advertisement
ಈ ಪ್ರಕರಣದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಅವರ ಪುತ್ರನ ಹೆಸರು ಕೂಡ ಕೇಳಿ ಬಂದಿದೆ ಎನ್ನುವ ಪ್ರಶ್ನೆಗೆ ಸಾವಿಗೆ ಯಾರದೇ ಪಾತ್ರ ಇದ್ದರೂ ತನಿಖೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ ಎಂದು ಹೇಳಿದರು.
ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಕ್ಲೀನ್ ಚಿಟ್ ವಿಚಾರದಲ್ಲಿ ನ್ಯಾ.ಕೆಂಪಣ್ಣ ಆಯೋಗದ ವರದಿಗೆ ಕಿಮ್ಮತ್ತಿಲ್ಲ. ಕೆಂಪಣ್ಣ, ಕೆಂಪಯ್ಯ ಎಲ್ಲಾ ಒಂದೇ ಅಲ್ವಾ? ತರಾತುರಿಯಲ್ಲಿ ವರದಿ ಕೊಟ್ಟಿದ್ದಾರೆ. ವರದಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಬಿಎಸ್‍ವೈ ಹೇಳಿದರು.