– ಸಿಬಿಐನಿಂದ ಮಡಿಕೇರಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ
– ಕೊಲೆಯಲ್ಲ ಇದು ಆತ್ಮಹತ್ಯೆ ಪ್ರಕರಣ
– ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್ ಪಾತ್ರ ಇಲ್ಲ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಜಾರ್ಜ್ ಅವರಿಗೆ ಸಿಬಿಐ ಕ್ಲೀನ್‍ಚಿಟ್ ನೀಡಿದೆ.
ತನಿಖೆ ನಡೆಸಿದ್ದ ಸಿಬಿಐ ಮಡಿಕೇರಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದೆ. ಗಣಪತಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಉಸಿರುಗಟ್ಟಿ ಗಣಪತಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದರು. ಈ ವರದಿಯ ಆಧಾರದಲ್ಲಿ ಗಣಪತಿ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಸಿಬಿಐ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ಜಾರ್ಜ್ ಜೊತೆಗೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್ ಪಾತ್ರವೂ ಇಲ್ಲ ಎಂದು ಉಲ್ಲೇಖಿಸಿದೆ. ಜಾರ್ಜ್, ಮೊಹಂತಿ, ಪ್ರಸಾದ್ ಅವರು ಗಣಪತಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಕೌಟುಂಬಿಕ ಕಾರಣಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಿಬಿಐ ಉಲ್ಲೇಖಿಸಿದೆ.
Advertisement
Advertisement
ಗಣಪತಿಯವರು ಸೇವೆಯಲ್ಲಿದ್ದ ಸಮಯದಲ್ಲಿ ಕರ್ತವ್ಯಲೋಪ ಎಸಗಿರುವುದು ದೃಢಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮಗಳನ್ನು ಎದುರಿಸಿದ್ದಾರೆ. ಶಿಸ್ತು ಕ್ರಮದಿಂದಾಗಿ ಗಣಪತಿ ಅವರ ಭಡ್ತಿ, ಭವಿಷ್ಯದ ಮೇಲೆ ಪರಿಣಾಮ ಬೀರಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಇದರ ಜೊತೆಗೆ ಈ ಮೂವರ ವಿರುದ್ಧದ ಪ್ರಕರಣವನ್ನು ರದ್ದು ಮಾಡಿ ಖುಲಾಸೆ ಮಾಡಬಹುದು ಎಂಬ ಟಿಪ್ಪಣಿ ಅಂಶವನ್ನೂ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಿಬಿಐ ಉಲ್ಲೇಖಿಸಿದೆ.
Advertisement
ಏನಿದು ಪ್ರಕರಣ?: 2016 ಜುಲೈ 7 ರಂದು ಡಿವೈಎಸ್ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣವ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿತ್ತು.
ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆ ಗಣಪತಿ ತಂದೆ ಕುಶಾಲಪ್ಪ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟಿನ ನ್ಯಾ. ಉದಯ ಲಲಿತ್, ನ್ಯಾ ಆದರ್ಶಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ 2017ರ ಸೆಪ್ಟೆಂಬರಿನಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿತ್ತು.
ತಕರಾರು ಅರ್ಜಿ ಸಲ್ಲಿಸಿರಲಿಲ್ಲ: ಸಚಿವ ಜಾರ್ಜ್ ಅವರಿಗೆ ಸಿಐಡಿ ನೀಡಿರುವ ಬಿ ರಿಪೋರ್ಟ್ ಅನ್ನು ಗಣಪತಿ ಅವರ ಪುತ್ರ ನೇಹಾಲ್ ಒಪ್ಪಿಕೊಂಡಿದ್ದರು. ಸಿಐಡಿ ಸಲ್ಲಿಸಿದ ಬಿ ರಿಪೋರ್ಟಿಗೆ ಗಣಪತಿ ಪುತ್ರ ಯಾವುದೇ ತಕರಾರು ಅರ್ಜಿ ಸಲ್ಲಿಸಿರಲಿಲ್ಲ. ಈ ಕಾರಣಕ್ಕೆ ಕುಶಾಲಪ್ಪನವರು ಹೈಕೋರ್ಟ್, ಸುಪ್ರೀಂ ಮೊರೆ ಹೋಗಿದ್ದರು.
ದಾಖಲೆಗಳು ನಾಶ: ಗಣಪತಿ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ ಉಲ್ಲೇಖ ಇರುವುದನ್ನು ಬಹಿರಂಗಪಡಿಸಿತ್ತು. ಆತ್ಮಹತ್ಯೆ ಮಾಡಿಕೊಂಡ ದಿನಾಂಕದ ಬಳಿಕ ಹಾಲಿ ಮಂತ್ರಿ, ಮಾಜಿ ಮಂತ್ರಿ, ಹಾಲಿ ಶಾಸಕರು, ಕೇಂದ್ರ ಸಚಿವರ ಸಂಬಂಧಿ, ಮುಖಂಡರು, ಇಬ್ಬರು ಪೊಲೀಸ್ ಅಧಿಕಾರಿಗಳ ಕರೆ ದಾಖಲೆ, ಮೊಬೈಲ್ ದಾಖಲೆ ನಾಶ ಮಾಡಿರುವುದು ಹಾಗೂ ಕಂಪ್ಯೂಟರ್ ದಾಖಲೆ ನಾಶ ಮಾಡಿರೋದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಐಡಿ ವಿಧಿ ವಿಜ್ಞಾನ ವರದಿಯನ್ನು ತನಿಖೆ ವೇಳೆ ಪರಿಗಣಿಸಿದೇ ಸಚಿವ ಜಾರ್ಜ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚೀಟ್ ನೀಡಿದೆ. ಈ ವೇಳೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳನ್ನು ವಾಹಿನಿ ಮಾತನಾಡಿಸಿತ್ತು. ಜಗನ್ ಬೆಳ್ಳಿಯಪ್ಪ ಮಾತನಾಡಿ, ಪೊಲೀಸ್ ಅಧಿಕಾರಿಗಳು ನಮ್ಮ ಜೊತೆ ಜಾಸ್ತಿ ಪ್ರಶ್ನೆ ಕೇಳಿಲ್ಲ. ಕೆಲ ಪ್ರಶ್ನೆ ಕೇಳಿದರು. ಏನು ಪ್ರಶ್ನೆ ಕೇಳಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕೊನೆಗೆ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಹಾಕಲು ಹೇಳಿದರು. ನಾವು ಸಹಿ ಹಾಕಿದ್ವಿ ಎಂದು ತಿಳಿಸಿದ್ದರು.
ಏನೇನು ಡಿಲೀಟ್ ಆಗಿದೆ?: 100 ಇಮೇಲ್, 2699 ವರ್ಡ್ ಫೈಲ್, 910 ಎಂಎಸ್ ಎಕ್ಸೆಲ್ ಫೈಲ್, 145 ಪಿಡಿಎಫ್ ಫೈಲ್, 2500 ಇಮೇಜ್ ಫೈಲ್, 331 ಪಿಪಿಟಿ ಫೈಲ್, 791 ಟೆಕ್ಸ್ಟ್ ಫೈಲ್, 352 ಕಾಂಟಾಕ್ಟ್ , 52 ಮೆಸೇಜ್‍ಗಳು ಡಿಲೀಟ್ ಆಗಿದೆ ಎಂದು ವಾಹಿನಿ ವರದಿ ಪ್ರಸಾರಿಸಿತ್ತು.
https://www.youtube.com/watch?v=p2V1xEclj3g&feature=emb_title