ನವದೆಹಲಿ: 700 ವರ್ಷ ಹಳೆಯ ಆಲದ ಮರವನ್ನು ರಕ್ಷಿಸಲು ತೆಲಂಗಾಣದ ಅಧಿಕಾರಿಗಳು ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ.
ಮರದ ಕೆಲವು ಕೊಂಬೆಗಳಿಗೆ ಗೆದ್ದಲು ಹಿಡಿದಿದೆ. ಮರವನ್ನು ಗೆದ್ದಲಿನಿಂದ ಉಳಿಸಲು ಅಧಿಕಾರಿಗಳು ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಕೊಂಬೆಗಳಿಗೆ ನೀಡುತ್ತಿದ್ದಾರೆ.
Advertisement
ಮಹಬೂಬ್ ನಗರದಲ್ಲಿರುವ ಪಿಳ್ಳಲಮರಿ ಅಥವಾ ಪೀರ್ಲಾ ಮರ್ರಿ ಎಂದು ಕರೆಯಲ್ಪಡುವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಈ ಆಲದ ಮರ ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಪಂಚದಲ್ಲೇ ಎರಡನೇ ದೊಡ್ಡ ಆಲದ ಮರ ಇದಾಗಿದೆ.
Advertisement
ಕಳೆದ ಡಿಸೆಂಬರ್ ನಲ್ಲಿ ಗೆದ್ದಲು ಹುಳುಗಳ ಕಾಟದಿಂದ ಒಂದು ಕೊಂಬೆ ಮುರಿದು ಬಿದ್ದಿತ್ತು. ಇದಾದ ನಂತರ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಗೆದ್ದಲು ಹುಳಗಳಿಂದ ಮರವನ್ನು ರಕ್ಷಿಸಲು ಪ್ರತಿ ಎರಡು ಮೀಟರ್ ಗೆ ರಾಸಾಯನಿಕ ಕ್ಲೋರಿಪಿರಿಫೊಸ್ ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಮರಕ್ಕೆ ಕೊಡಲಾಗುತ್ತಿದೆ. ರೋಗಿಗಳಿಗೆ ಡ್ರಿಪ್ ಹಾಕಿ ವೈದ್ಯರು ಗಮನಿಸುವಂತೆ ಆಲದ ಮರವನ್ನು ಗಮನಿಸಲಾಗುತ್ತಿದೆ ಎಂದು ತಿಳಿಸಿದರು.
Advertisement
ಮೊದಲಿಗೆ ಮರದ ಕಾಂಡಕ್ಕೆ ತೂತುಗಳನ್ನು ಮಾಡಿ ನೇರವಾಗಿ ಕ್ರಿಮಿನಾಶಕವನ್ನು ಹಾಕಿದೆವು. ಆದರೆ ಈ ಪ್ರಯತ್ನ ಫಲ ಕೊಡದ ಹಿನ್ನೆಲೆಯಲ್ಲಿ ಈಗ ಕೊಂಬೆಗಳಿಗೆ ಕ್ರಿಮಿನಾಶಕದ ಡ್ರಿಪ್ಸ್ ಹಾಕಿಸಲಾಗುತ್ತಿದೆ ಎಂದು ತಿಳಿಸಿದರು.
ರಾಸಾಯನಿಕ ಇರುವ ನೀರನ್ನು ಮರಕ್ಕೆ ಕೊಡಲಾಗುತ್ತಿದೆ. ಗೆದ್ದಲು ಹಿಡಿದು ಬೀಳುವಂತೆ ಆಗಿರುವ ದೊಡ್ಡ ಕೊಂಬೆಗಳಿಗೆ ಬೀಳದಂತೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಚುಕ್ಕಾ ಗಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಆಲದ ಮರದ ಆರೋಗ್ಯ ಈಗ ಸ್ಥಿರವಾಗಿದೆ. ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಸ್ವಲ್ಪ ದಿನಗಳ ನಂತರ ಸಾರ್ವಜನಿಕ ವೀಕ್ಷಣೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಈ ಸಮಯ ಪ್ರವಾಸಿಗರು ಸ್ವಲ್ಪ ದೂರದಿಂದ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ರೊನಾಲ್ಡ್ ರೋಸ್ ಅವರೇ ಖುದ್ದು ಮರದ ಆರೋಗ್ಯವನ್ನು ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.