ಬೆಂಗಳೂರು: ಸಿಲಿಕಾನ್ ಸಿಟಿ ಜನ ಮಳೆಯಿಂದ ತತ್ತರಿಸಿ ಹೋಗಿದ್ದರೆ ಸಮ್ಮಿಶ್ರ ಸರ್ಕಾರ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ನಲ್ಲಿ ಸಂಚರಿಸಿ ಅಧಿಕಾರದ ದರ್ಪ ಮೆರೆದಿದ್ದಾರೆ.
ಕಳೆದ ಎರಡು ದಿನಗಳಿಂದ ಭಾರೀ ಮಳೆಗೆ ಸಿಲುಕಿದ್ದ ಬೆಂಗಳೂರಿನ ಜನರು ಟ್ರಾಫಿಕ್ ಸಮಸ್ಯೆಯಿಂದ ಹೈರಣಾಗಿದ್ದಾರೆ. ಅಲ್ಲದೇ ಇಂದು ಮಧ್ಯಾಹ್ನದ ವೇಳೆಗೆ ಮತ್ತೆ ಮಳೆ ಆರಂಭವಾಗಿದ್ದರಿಂದ ನಗರ ಬಹುತೇಕ ಕಡೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಡಿಸಿಎಂ ಪರಮೇಶ್ವರ್ ಅವರು ಯಲಹಂಕ ಕಡೆಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಕಾರಣ ಝಿರೋ ಟ್ರಾಫಿಕ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಿಸಿಎಂ ಸೂಚನೆಯಂತೆ ನಗರದ ಬಳ್ಳಾರಿ ರಸ್ತೆಯಲ್ಲಿ ಝಿರೋ ಟ್ರಾಫಿಕ್ ಮಾಡಲಾಗಿತ್ತು. ಇದರಿಂದ ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಬಳ್ಳಾರಿ ರಸ್ತೆ ಮತ್ತು ಈ ರಸ್ತೆಗೆ ಸಂಪರ್ಕ ಕಲ್ಪಿಸುವ ಇತರ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಗೃಹ ಇಲಾಖೆಯನ್ನು ನಿರ್ವಹಿಸುತ್ತಿರುವ ಡಿಸಿಎಂ ಪರಮೇಶ್ವರ್ ಅವರು ತಮ್ಮ ಇಲಾಖೆಯ ಪೊಲೀಸ್ ಅಧಿಕಾರಿಗಳಿಗೆ ತಾವು ಎಲ್ಲೇ ತೆರಳಿದರೂ ಝಿರೋ ಟ್ರಾಫಿಕ್ ಮಾಡಲೇಬೇಕೆಂಬ ಆದೇಶ ನೀಡಿದ್ದಾರೆ. ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವ ಪೊಲೀಸರು ಮಳೆಯ ನಡುವೆಯೂ ಪರಮೇಶ್ವರ್ ಗೆ ಝೀರೋ ಟ್ರಾಫಿಕ್ ಮಾಡಿಕೊಡುವ ಮೂಲಕ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ.
ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಸೂಚನೆ ನೀಡಿದೆ. ಅಲ್ಲದೇ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಡಿಸಿಎಂ ಸಂಚರಿಸಿದ್ದ ಹೆಬ್ಬಾಳ ಸೇತುವೆ ಬಳಿ ಭಾರೀ ನೀರು ನಿಂತಿದ್ದ ಕಾರಣ ಬೆಳಗ್ಗೆಯಿಂದಲೇ ಟ್ರಾಫಿಕ್ ಅಧಿಕವಾಗಿತ್ತು. ಸಂಜೆ ವೇಳೆ ಮತ್ತೆ ಮಳೆ ಆರಂಭವಾಗಿದ್ದು, ಶಾಲಾ ಕಾಲೇಜು ಬಿಡುವ ಸಮಯದಲ್ಲೇ ಝಿರೋ ಟ್ರಾಫಿಕ್ ಮಾಡಿದ್ದ ಕಾರಣ ಸಣ್ಣ ಮಕ್ಕಳನ್ನು ಶಾಲೆಯಿಂದ ಕರೆತರಲು ಬೈಕಿನಲ್ಲಿ ಬಂದಿದ್ದ ಪೋಷಕರು ಮಳೆಯಲ್ಲೇ ನಿಂತಿದ್ದರು. ಮಳೆಯಿಂದಾಗಿ ಜನ ಟ್ರಾಫಿಕ್ ನಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿದ್ದರೂ ಅಧಿಕಾರದ ಮದದಲ್ಲಿರುವ ಪರಮೇಶ್ವರ್ ಇದಕ್ಕೂ ನನಗೂ ಸಂಬಂಧ ಇಲ್ಲ. ನಾನೇ ಬೆಂಗಳೂರಿನ ರಾಜ ಎನ್ನುವಂತೆ ದಾದಾಗಿರಿ ತೋರಿಸಿದ್ದಾರೆ.
ಡಿಸಿಎಂ ಅವರ ಅಡಿಯಲ್ಲಿ ಗೃಹ ಇಲಾಖೆಯೂ ಇರುವುದರಿಂದ ಪೊಲೀಸರು ಹೈರಣಾಗಿದ್ದು, ಪರಮೇಶ್ವರ್ ಕೋರಿಕೆಯಂತೆ ಅನಿವಾರ್ಯವಾಗಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಜನರ ಟೀಕೆಗೆ ಗುರಿಯಾಗುತ್ತಿದ್ದಾರೆ. ನಿಯಮಗಳ ಅನ್ವಯ ಮುಖ್ಯಮಂತ್ರಿಗಳಿಗೆ ಮಾತ್ರ ಝಿರೋ ಟ್ರಾಫಿಕ್ ಮಾಡಲು ಅವಕಾಶವಿದೆ. ಆದರೆ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಪರಮೇಶ್ವರ್ ತಮ್ಮ ಅಧಿಕಾರ ಮದದಿಂದಾಗಿ ನಗರದಲ್ಲಿ ಎಲ್ಲೇ ಸಂಚರಿಸಲು ಝೀರೋ ಟ್ರಾಫಿಕ್ ಮಾಡುವಂತೆ ಆದೇಶಿಸಿದ್ದು ಈಗ ಸಾರ್ವಜನಿಕರ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಪರಮೇಶ್ವರ್ ಅವರ ಈ ದರ್ಬಾರ್ ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ತಿಳಿಸಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv