– ಶಾಶ್ವತ ಪರಿಹಾರಕ್ಕೆ ಜನರ ಒತ್ತಾಯ
ಹಾಸನ: ಬೇಲೂರು (Beluru) ತಾಲೂಕಿನ ಹಳೇಬೀಡು (Halebeedu) ಗ್ರಾಮದ ಬೃಹತ್‍ದಾಕಾರದ ದ್ವಾರಸಮುದ್ರ ಕೆರೆ ತುಂಬಿ ಕೋಡಿ ಹರಿದಾಗಲೆಲ್ಲಾ ಅನತಿ ದೂರದಲ್ಲಿರುವ ಬೂದಿಗುಂಡಿ ಬಡಾವಣೆಯಲ್ಲಿರುವ ನೂರಾರು ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿವೆ. ಕೆರೆ ಕೋಡಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಮನೆಗಳಿಗೆ ನೀರು ನುಗ್ಗುತ್ತಿದೆ.
ಮನೆಗಳಿಗೆ ಹಾವು, ಏಡಿ, ಕಪ್ಪೆಗಳು ಬರುತ್ತಿದ್ದು ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಕೋಡಿ ದುರಸ್ತಿ ಮಾಡುವಂತೆ ಅಥವಾ ಮನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಯ ಮೊದಲ ಹಂತ ಉದ್ಘಾಟನೆ ಬೆನ್ನಲ್ಲೆ ಕೇಂದ್ರ ಸರ್ಕಾರ ಆಕ್ಷೇಪ

ಬಾರಿ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿರುವ ದ್ವಾರಸಮುದ್ರ ಕೆರೆ ತುಂಬಿ ಕೋಡಿ ಬಿದ್ದಾಗಲೆಲ್ಲಾ ಕೋಡಿ ನೀರು ಹರಿಯುವ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತ್ತಿದೆ. 2012 ರಲ್ಲಿ ಧಾರಾಕಾರ ಮಳೆಯಿಂದ ಕೆರೆ ಕೋಡಿ ಬಿದ್ದು ಪ್ರವಾಹವೇ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಸ್ಥಳೀಯರ ನೆರವಿನಿಂದ ಮನೆಗಳಲ್ಲಿ ವಾಸಿಸುತ್ತಿದ್ದು ನೂರಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ಮುಳುಗಿ ಅಪಾರ ನಷ್ಟ ಅನುಭವಿಸಿದ್ದು ಎಲ್ಲರನ್ನೂ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿ, ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸುವ ಭರವಸೆಯನ್ನು ಅಂದಿನ ಸರ್ಕಾರ ಹಾಗೂ ಜನಪ್ರತಿನಿಧಿಗಳು ನೀಡಿದ್ದರು.

ಒಂಟಿತಮ್ಮನಹಳ್ಳಿ ಗುಡ್ಡದಲ್ಲಿ ನಿರಾಶ್ರಿತರಿಗೆ ನಿವೇಶನ ಒದಗಿಸುವ ಕಾರ್ಯಕ್ಕೆ ಚಾಲನೆ ಕೂಡ ನೀಡಲಾಗಿತ್ತು. ಆದಾದ ಬಳಿಕ ಸರ್ಕಾರ ಹಾಗೂ ಜನಪ್ರತಿನಿಧಿಗಳು ಬದಲಾಗಿದ್ದು ಕೊಟ್ಟ ಭರವಸೆ ಈಡೇರದ ಕಾರಣ ಎಲ್ಲಾ ಬಡ ಕುಟುಂಬಗಳು ಹಳೇಯ ಸ್ಥಳಕ್ಕೆ ವಾಪಾಸ್ ಬಂದು ನೆಲೆಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ದ್ವಾರಸಮುದ್ರ ಕೆರೆಗೆ ಎತ್ತಿನಹೊಳೆ ಯೋಜನೆ ಮೂಲಕ ನೀರು ಹರಿಸುತ್ತಿದ್ದು ಕೆರೆ ಕೋಡಿ ಬಿದ್ದು ಬಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಬೂದಿಗುಂಡಿ ನಿವಾಸಿಗಳಿಗೆ ಮತ್ತದೆ ಸಮಸ್ಯೆ ಎದುರಾಗಿದೆ.
ಸದ್ಯ ವಾಸವಿರುವ ಮನೆಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ. ಈಗಾಗಲೇ ಗುರುತು ಮಾಡಿರುವ ಜಾಗದಲ್ಲಿ ಸಮತಟ್ಟು ಮಾಡಿ ನಿವೇಶನ ನೀಡಲು ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಕೆರೆ ಕೋಡಿಗೆ ಕಾಲುವೆ ನಿರ್ಮಿಸಿ ಅದರ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಇದೇ ಜಾಗದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ವಿತರಿಸಬೇಕು. ಇಲವಾದಲ್ಲಿ ನಿರಾಶ್ರಿತರಿಗೆ ಗುರುತು ಮಾಡಿರುವ ಜಾಗದಲ್ಲಾದರೂ ನಿವೇಶನ ನೀಡಬೇಕೆಂದು ಒಕ್ಕೊರಲಿನಿಂದ ಜನರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಐತಿಹಾಸಿಕ ದ್ವಾರಸಮುದ್ರ ಕೆರೆ ಭರ್ತಿಯಾದರೆ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಕಲ್ಪಿಸುತ್ತಿತ್ತು. ಇದೀಗ ಎತ್ತಿನಹೊಳೆ (Yettinahole) ಯೋಜನೆ ಮೂಲಕ ನೀರು ಹರಿಸಿ ದ್ವಾರಸಮುದ್ರ ಕೆರೆ ಭರ್ತಿಯಾಗುತ್ತಿದ್ದು ಕೆರೆ ಕೊಡಿಯಿಂದ ಹರಿಯುವ ನೀರು ನೂರಾರು ಬಡ ಕುಟುಂಬಗಳಿಗೆ ಕಂಟಕವಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ಸುದೀರ್ಘ ಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿ 3,000 ಕೋಟಿ ಅನುದಾನ ಕೊಡಲಾಗಿದೆ, ಸಿಎಂಗೆ ರೈತರ ಬಗ್ಗೆ ಕಾಳಜಿ ಇದೆ: ಬೈರತಿ ಸುರೇಶ್

