ಡಾ. ವಿಷ್ಣುವರ್ಧನ್ (Vishnuvardhan) ಜೊತೆ ಸಿನಿಮಾ ಮಾಡಲು ಅತಿರಥ ಮಹಾರಥ ನಿರ್ದೇಶಕರು, ನಿರ್ಮಾಪಕರು ದುಂಬಾಲು ಬೀಳುತ್ತಿದ್ದರು ಎನ್ನುವುದಕ್ಕೆ ಅವರ ಚಿತ್ರಗಳೇ ಸಾಕ್ಷಿ. ಡಾ. ರಾಜಕುಮಾರ್ ಗರಡಿಯಿಂದ ಬಂದ ಸಾಕಷ್ಟು ನಿರ್ದೇಶಕರು ಮತ್ತು ನಿರ್ಮಾಪಕರು ವಿಷ್ಣುವರ್ಧನ್ ಅವರ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. ಎಲ್ಲ ಹಂಗುಗಳನ್ನು ತೊರೆದುಕೊಂಡು ಬಂದು ವಿಷ್ಣು ಮುಂದೆ ನಿಲ್ಲುತ್ತಿದ್ದರು. ಅಂತಹ ಕಾಲ್‌ಶೀಟ್‌ಗಾಗಿ ಕಾದ ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರಲ್ಲಿ ದ್ವಾರಕೀಶ್ ಕೂಡ ಒಬ್ಬರು.
Advertisement
ವಿಷ್ಣುವರ್ಧನ್ ಮತ್ತು ದ್ವಾರಕೀಶ್ (Dwarakish) ಅವರ ಚೊಚ್ಚಲ ಸಿನಿಮಾ `ಕಳ್ಳ ಕುಳ್ಳ’ ಬರುವ ಹೊತ್ತಿಗೆ ದ್ವಾರಕೀಶ್ ಅವರು ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದರು. ಹೆಸರಾಂತ ನಟರಾಗಿ ಗುರುತಿಸಿಕೊಂಡಿದ್ದರು. ದ್ವಾರಕೀಶ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದ ದಿನಮಾನಗಳವು. ಅಂತಹ ವೇಳೆಯಲ್ಲಿ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಬೇಕು ಎಂದು ಕನಸುಕಂಡರು ಕನ್ನಡದ ಕುಳ್ಳ ದ್ವಾರಕೀಶ್. ತಮ್ಮ ಮನೆಯ ಬಾಗಿಲಿಗೆ ಬಂದ ಯಾರನ್ನೂ ವಿಷ್ಣು ನಿರಾಸೆಗೊಳಿಸುತ್ತಿರಲಿಲ್ಲ. ದ್ವಾರಕೀಶ್‌ನಂತಹ ಮೇರು ನಟ ಬಂದರೆ, ಖಾಲಿ ಕೈಯಲ್ಲಿ ಕಳುಹಿಸುವ ಮಾತೇ ಇಲ್ಲ. `ಆಯಿತು ಒಟ್ಟಿಗೆ ಸಿನಿಮಾ ಮಾಡೋಣ’ ಎಂದು ಹೇಳಿಬಿಟ್ಟಿದ್ದರು ವಿಷ್ಣು. ಆಗ ತಯಾರಾಗಿದ್ದೆ `ಕಳ್ಳ ಕುಳ್ಳ’ ಚಿತ್ರ. 1975ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ `ಕಳ್ಳ ಕುಳ್ಳ ಜೋಡಿ’ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು.
Advertisement
Advertisement
ಕಳ್ಳ ಕುಳ್ಳ ನಂತರ ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್‌ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು… ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಾ ಹೋಯಿತು. ವಿಷ್ಣುವರ್ಧನ್ ಮೇಲೆ ದ್ವಾರಕೀಶ್ ಅವರಿಗೆ ಎಷ್ಟು ನಂಬಿಕೆ ಬಂತೆಂದರೆ ವಿಷ್ಣುವಿದ್ದರೆ ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ಅನುಮಾನವಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿದ್ದರು. ಅದು ನಿಜವೂ ಆಗಿತ್ತು. ಈ ಧೈರ್ಯದಿಂದಲೇ ಅವರು `ರಾಜಾ ಕುಳ್ಳ’ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಲು ಮುಂದಾದರು.
Advertisement
ಎಪ್ಪತ್ತರ ದಶಕದಲ್ಲಿ ಮದರಾಸು, ಬೆಂಗಳೂರು, ಮೈಸೂರಿನ ಸುತ್ತಲಿನ ಸ್ಟುಡಿಯೋಗಳಲ್ಲಿ ಅಥವಾ ಆ ಸ್ಟುಡಿಯೋಗಳನ್ನೇ ಆಶ್ರಯಿಸಿಕೊಂಡಿದ್ದ ಹೊರಾಂಗಣದಲ್ಲಿ ಚಿತ್ರೀಕರಣ ಮಾಡುವ ವಾಡಿಕೆಯಿತ್ತು. ಬಜೆಟ್ ಕೂಡ ಹಿಗ್ಗಿಸುವಂತಹ ಧೈರ್ಯ ಮಾಡುತ್ತಿರಲಿಲ್ಲ. ಆದರೆ, ಪ್ರಪ್ರಥಮವಾಗಿ ತಮ್ಮ ಸಿನಿಮಾವನ್ನು ಸಿಂಗಾಪುರದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಲ್ಲಿ ಯಶಸ್ವಿ ಕೂಡ ಆದರು ದ್ವಾರಕೀಶ್. ಕನ್ನಡ ಚಿತ್ರರಂಗದಲ್ಲೇ ಸಿಂಗಾಪುರದಲ್ಲಿ ಶೂಟಿಂಗ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ `ರಾಜಾ ಕುಳ್ಳ’ ಪಾತ್ರವಾಯಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಯಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಭವ್ಯ ಜೊತೆಯಾಗಿ ನಟಿಸಿದ್ದ `ನೀ ಬರೆದ ಕಾದಂಬರಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ, ಈ ಜೋಡಿಯ ಮಧ್ಯೆಯೂ ಬಿರುಕುಂಟಾಯಿತು.
ಯಶಸ್ಸು ಯಾವತ್ತಿಗೂ ಒಂದಾಗಿರುವುದಕ್ಕೆ ಬಿಡುವುದಿಲ್ಲ. ಅದನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಯಶಸ್ಸಿನ ಅಮಲು ತಲೆಗೇರಿಸಿಕೊಂಡರೆ ಎಂತಹ ಅನಾಹುತ ಆಗುತ್ತದೆ ಎನ್ನುವುದಕ್ಕೆ ದ್ವಾರಕೀಶ್ ನಡೆಯೇ ಸಾಕ್ಷಿ. ಸಿನಿಮಾಗಳು ಗೆಲ್ಲುತ್ತಾ ಹೋದವು. ಹಣವೂ ಹಾಗೆಯೇ ಹರಿದು ಬಂತು. ಗೆಲ್ಲುವ ಕುದುರೆ ಎಂಬ ವಿಷ್ಣುವರ್ಧನ್ ಎಲ್ಲರಿಗೂ ಪ್ರಿಯವಾಗಿ ಹೋದರು. ಬರೀ ದ್ವಾರಕೀಶ್ ಮಾತ್ರ ಶ್ರೀಮಂತನಾಗಬೇಕಾ? ನಮಗೂ ಕಾಲ್‌ಶೀಟ್ ಕೊಡಿ ಎಂದು ನಿರ್ಮಾಪಕರು ದುಂಬಾಲು ಬಿದ್ದರು. ನಮಗೂ ಒಂದು ಯಶಸ್ಸು ದಯಪಾಲಿಸಿ ಎಂದು ಇತರ ನಿರ್ದೇಶಕರು ವಿಷ್ಣುವರ್ಧನ್ ಅವರಲ್ಲಿ ಮನವಿ ಮಾಡಿಕೊಂಡರು. ಕಷ್ಟ ಅಂತ ಬಂದರೆ ತಕ್ಷಣವೇ ಕರಗುತ್ತಿದ್ದ ಅವರು ಇತರರಿಗೆ ಕಾಲ್‌ಶೀಟ್ ಕೊಡಲು ಶುರು ಮಾಡಿದರು. ಅಲ್ಲಿಗೆ ದ್ವಾರಕೀಶ್ ಕೋಪಗೊಂಡರು. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದನಲ್ಲ ಎಂದು ಅಪಾರ್ಥ ಮಾಡಿಕೊಂಡರು. ಗೆಳೆತನದ ವಿಷಯದಲ್ಲಿ ವ್ಯಾಪಾರವನ್ನೂ ಎಳೆತಂದರು. ಅದು ವಿಷ್ಣುವರ್ಧನ್ ಅವರಿಗೆ ಇಷ್ಟವಾಗಲಿಲ್ಲ. ಯಾರಾದರೂ ತಮ್ಮನ್ನು ಬೆಳೆಸಿದೆ ಎಂದು ಹೇಳಿಬಿಟ್ಟರೆ ವಿಷ್ಣುವರ್ಧನ್ ಅವರಿಗೆ ಆಗುತ್ತಿರಲಿಲ್ಲ. ಯಾರೂ, ಯಾರನ್ನೂ ಬೆಳೆಸುವುದಿಲ್ಲ ಎನ್ನುವ ಸಿದ್ಧಾಂತದಲ್ಲಿ ಬದುಕಿದ್ದ ಜೀವವದು. ದ್ವಾರಕೀಶ್ ಮಾತು ಇಷ್ಟವಾಗಲಿಲ್ಲ. ಪರಸ್ಪರ ಕಿತ್ತಾಡಿಕೊಂಡರು. ದ್ವಾರಕೀಶ್ ಅವರಿಂದ ದೂರವೇ ಆದರು. ಇಬ್ಬರೂ ಕೂತು ಮಾತನಾಡಿದ್ದರೆ ಸರಿ ಹೋಗಬಹುದಿತ್ತು. ಹರಿದ ಕೌದಿ ಹೊಳೆಯಲು ತುಂಬಾ ಜಾಣ್ಮೆ ಬೇಕಿರಲಿಲ್ಲ. ಎದುರು ಕೂತು ಮಾತನಾಡಿದ್ದರೆ ಸಾಕಿತ್ತು. ಆದರೆ ದ್ವಾರಕೀಶ್ ಹಾಗೆ ಮಾಡಲಿಲ್ಲ. ವಿಷ್ಣು ಎದುರಿಗೆ ಹೊಸ ಹೀರೋಗಳನ್ನು ತಂದು ನಿಲ್ಲಿಸುತ್ತೇನೆ ಎಂದು ಘೋಷಿಸಿದರು. ಹೊಸಬರನ್ನು ಹಾಕಿಕೊಂಡು ಡಾನ್ಸ್ ರಾಜ ಡಾನ್ಸ್, ಶ್ರುತಿ ಹಾಕಿದ ಹೆಜ್ಜೆ-ಹೀಗೆ ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ, ಗೆದ್ದದ್ದು ಮೂರು ಮತ್ತೊಂದು ಮಾತ್ರ. ಬಹುತೇಕ ಚಿತ್ರಗಳು ನೆಲಕಚ್ಚಿದ ಪರಿಣಾಮ ಆರ್ಥಿಕವಾಗಿ ಕುಸಿದು ಬಿಟ್ಟರು. ಮಾಡಿಟ್ಟಿದ್ದ ಆಸ್ತಿ ಮಾರಬೇಕಾಗಿ ಬಂತು. ದ್ವಾರಕೀಶ್ ಅಕ್ಷರಶಃ ಕಂಗಾಲಾದರು. ದ್ವಾರಕೀಶ್ ಜೊತೆ ವಿಷ್ಣುವರ್ಧನ್ ಮಾತಾಡದೇ ಇದ್ದರೂ, ಹಿರಿಜೀವಕ್ಕೆ ಹೀಗಾಗುತ್ತಿದೆಯಲ್ಲ ಎಂದು ಒಳಗೊಳಗೆ ಸಂಕಟ ಪಟ್ಟರು. ದ್ವಾರಕೀಶ್ ದುಡುಕಬಾರದಿತ್ತು ಎಂದು ಕಣ್ಣೀರಿಟ್ಟರು. ಕನ್ನಡ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿರುವ, ಕಲಾವಿದರಿಗೆ ಅನ್ನ ಹಾಕಿರುವ, ಅಸಂಖ್ಯಾತ ಅಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟರೊಬ್ಬರು ಬೀದಿಗೆ ಬೀಳಬಾರದು ಎನ್ನುವ ಕಕ್ಕುಲಾತಿಯಿಂದಾಗ ವಿಷ್ಣು ಮತ್ತೆ ದ್ವಾರಕೀಶ್ ಅವರ ಕೈ ಹಿಡಿದರು. ಮತ್ತೆ ಕಾಲ್‌ಶೀಟ್ ಕೊಟ್ಟರು. ದ್ವಾರಕೀಶ್ ಮಾಡಿದ್ದ ಅಷ್ಟೂ ಸಾಲವನ್ನು `ಆಪ್ತಮಿತ್ರ’ ಸಿನಿಮಾ ತೀರಿಸಿತು. ವಿಷ್ಣುವರ್ಧನ್ ಜೊತೆಗಿನ ತಮ್ಮ ವೈಷಮ್ಯವನ್ನು ದ್ವಾರಕೀಶ್ ಅವರೇ ಸ್ವತಃ ಹಲವಾರು ಬಾರಿ ಹೇಳಿಕೊಂಡಿದ್ದಿದೆ. `ನಾನು ಅಹಂ ತೋರಿಸಬಾರದಿತ್ತು. ತಪ್ಪು ಮಾಡಿಬಿಟ್ಟೆ. ನನ್ನೊಂದಿಗೆ ವಿಷ್ಣು ಇದ್ದಿದ್ದರೆ ಇನ್ನೂ ಸಾಕಷ್ಟು ದಾಖಲೆಗಳನ್ನು ಮಾಡಬಹುದಿತ್ತು. ನಮ್ಮ ಯಶಸ್ಸಿನ ಜೋಡಿಯ ಮುಂದೆ ಇತರರು ಹೆದರುತ್ತಿದ್ದರು. ಅದೇ ನನ್ನನ್ನು ಮೂರ್ಖನನ್ನಾಗಿ ಮಾಡಿಸಿತು. ದೂರವಾದ ನಂತರ ಆರ್ಥಿಕ ಮುಗ್ಗಟ್ಟಿಗೆ ಬಳಲಿದೆ, ಆರೋಗ್ಯ ಹಾಳಾಯಿತು, ಆಸ್ತಿ ಕಳೆದುಕೊಂಡೆ. ಕೇವಲ ವಿಷ್ಣು ಮೇಲಿನ ಕೋಪದಿಂದ ಹಲವಾರು ಹೊಸ ಕಲಾವಿದರನ್ನು ಪರಿಚಯಿಸಿದೆ. ನೆಲಕ್ಕೆ ಬಿದ್ದೆ. ಆದರೆ, ಮತ್ತೆ ನನ್ನನ್ನು ಮೇಲಕ್ಕೆ ಎತ್ತಲಿಕ್ಕೆ ನನ್ನ ವಿಷ್ಣುನೇ ಬರಬೇಕಾಯಿತು’ ಎಂದು ಭಾವುಕರಾಗಿ ಹೇಳಿಕೊಂಡಿದ್ದಿದೆ. ನಾನು ವಿಷ್ಣುವನ್ನು ಮರೆತರೆ ದೇವರು ಎಂದೂ ನನ್ನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದೂ ಇದೆ. `ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಆಲದ ಮರವಿದ್ದಂತೆ. ಈಗ ಅವರು ಕುಸಿದಿದ್ದಾರೆ. ಬಸವಳಿದಿದ್ದಾರೆ. ಮತ್ತೆ ಅವರಿಗೆ ನಾವೆಲ್ಲ ಚೈತನ್ಯ ತುಂಬಬೇಕು. ಶಕ್ತಿಯಾಗಿ ನಿಲ್ಲಬೇಕು’ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲೂ ವಿಷ್ಣು ಹೇಳಿದ್ದರು. ಆಪ್ತಮಿತ್ರ ಸಿನಿಮಾಗೆ ಕಾಲ್‌ಶೀಟ್ ಕೊಟ್ಟರು. ಈ ಸಿನಿಮಾದ ಗೆಲುವು ದ್ವಾರಕೀಶ್ ಅವರಿಗೆ ಮರುಜನ್ಮ ನೀಡಿತು.