– ಅವಶ್ಯಕತೆಗಿಂತ ಹೆಚ್ಚು ಪೂರೈಕೆ ಮಾಡ್ತಿದ್ದೇವೆ
ನವದೆಹಲಿ: ದೆಹಲಿ, ಮಹಾರಾಷ್ಟ್ರ ತಮಿಳುನಾಡು ಸೇರಿ ಕೆಲವು ಪ್ರಮುಖ ರಾಜ್ಯಗಳಲ್ಲಿ ಹೆಚ್ಚು ಪ್ರಮಾಣದ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ವಿಸ್ತರಿಸಿದ್ದು ಸಮಸ್ಯೆ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಡಿವಿ. ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಮಳೆಗಾಲ ಶುರುವಾಗಿದ್ದು ಬಿತ್ತನೆಗೆ ಬೇಕಾದ ಅವಶ್ಯಕ ವಸ್ತುಗಳು ಮತ್ತು ರಸಗೊಬ್ಬರಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಎಂದಿನಂತೆ ರಸಗೊಬ್ಬರ ದೊರೆಯಲಿದ್ದು ಯಾವುದು ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಸ್ಟಾಕ್ ನೀಡಲಾಗಿದೆ ಎಂದರು.
Advertisement
Advertisement
ಔಷಧಿಗಳನ್ನು ಇಡಿ ದೇಶಕ್ಕೆ ನಾವು ಪೂರೈಕೆ ಮಾಡುತ್ತಿದ್ದೇವೆ. ದೇಶದ ಎಲ್ಲ ರಾಜ್ಯಗಳಲ್ಲೂ ಔಷಧಿ ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಾಹನ ಸಂಚಾರ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಸಾಗಾಣಿಕೆಯಲ್ಲಿ ಸ್ವಲ್ಪ ಏರುಪೇರಾಗಿ ಔಷಧೀಯ ಕೊರತೆ ಸೃಷ್ಟಿಯಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಈಗ ಈ ಸಮಸ್ಯೆ ಬಗೆಹರಿದಿದೆ. ಈಗ ಗೂಡ್ಸ್ ಟ್ರೇನ್ ಗಳ ಮೂಲಕ ಔಷಧಿಗಳ ಸಪ್ಲೇ ಆರಂಭವಾಗಿದ್ದು ಯಾವುದಕ್ಕೂ ತೊಂದರೆ ಇಲ್ಲ. ಏಪ್ರಿಲ್ 20ರ ಬಳಿಕ ಪರಿಸ್ಥಿತಿ ಅವಲೋಕಿಸಿ ಪ್ರಧಾನ ಮಂತ್ರಿಗಳ ಸೂಕ್ತ ಕ್ರಮ ತೆಗೆದುಕೊಳ್ಳಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.