– ಮಧ್ಯರಾತ್ರಿ ಚಿಮಣಿ ಮೂಲಕ ಹಾರೋಬೂದಿ ಬಿಡುತ್ತಿರುವ ಸಿಬ್ಬಂದಿ
– ಸುತ್ತಮುತ್ತಲ ಗ್ರಾಮಗಳ ಮನೆಯಲ್ಲೆಲ್ಲಾ ಬರೀ ಬೂದಿ
– ಅಸ್ತಮಾ, ಚರ್ಮರೋಗ, ಕ್ಯಾನ್ಸರ್ ಗೂ ಕಾರಣವಾಗುತ್ತಿರುವ ವಿಷ ಬೂದಿ
ರಾಯಚೂರು: ಜಿಲ್ಲೆಯ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಜಿಲ್ಲೆಗೆ ನೇರವಾಗಿ ಬೆಳಕು ನೀಡದಿದ್ದರೂ. ಸುತ್ತಮುತ್ತಲ ಗ್ರಾಮಗಳ ಜನರಿಗೆ ಜೀವ ಕಂಟಕವಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಕೇಂದ್ರದ ವಿಷಕಾರಿ ಹಾರೋಬೂದಿ ನೇರವಾಗಿ ಜನರ ಹೊಟ್ಟೆಯೊಳಗೆ ಹೋಗುತ್ತಿದೆ.
Advertisement
ಇಡೀ ರಾಜ್ಯಕ್ಕೆ ಶೇಕಡಾ 40 ರಷ್ಟು ಭಾಗದ ವಿದ್ಯುತ್ ಅನ್ನು ನೀಡುವ ರಾಯಚೂರಿನ ಶಕ್ತಿನಗರದ ಆರ್ ಟಿಪಿಎಸ್ ಇಲ್ಲಿನ ಜನರಿಗೆ ಮಾತ್ರ ದಿನೇ ದಿನೇ ಮಾರಕವಾಗುತ್ತಿದೆ. ಆರ್ ಟಿಪಿಎಸ್ ಸುತ್ತಮುತ್ತಲ ವಡ್ಲೂರ್, ಯದ್ಲಾಪೂರ, ರಂಗಾಪುರ, ಚಿಕ್ಕಸೂಗುರು ಗ್ರಾಮಗಳು ತತ್ತರಿಸಿ ಹೋಗಿವೆ. ಸುರಕ್ಷಿತವಾಗಿ ವಿದ್ಯುತ್ ಕೇಂದ್ರದಿಂದ ಸರಬರಾಜಾಗಬೇಕಾದ ಹಾರೋಬೂದಿ ನಿರ್ವಹಣೆ ಹದಗೆಟ್ಟಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದಲಂತೂ ನೇರವಾಗಿ ಚಿಮಣಿಗಳ ಮೂಲಕ ಬೂದಿಯನ್ನ ಗಾಳಿಗೆ ಬಿಡಲಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಬೂದಿಯನ್ನ ಗಾಳಿಯಲ್ಲಿ ಬಿಟ್ಟು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
Advertisement
Advertisement
ಪ್ರತಿದಿನ 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಆರ್ ಟಿಪಿಎಸ್ ನಲ್ಲಿ ಸಾವಿರಾರು ಟನ್ ಕಲ್ಲಿದ್ದಲು ಸುಟ್ಟ ಬಳಿಕ ಬರುವ ಬೂದಿಯಲ್ಲಾ ಈಗ ಗಾಳಿಗೆ ಸೇರುತ್ತಿದೆ. ಇದರಿಂದ ಅಸ್ತಮಾ, ಚರ್ಮ ರೋಗ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಿಂದ ಜನ ಬಳಲುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದುವರೆಗೂ 8 ಜನ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಇತ್ತೀಚೆಗೆ ಸಾವನ್ನಪ್ಪಿದ ಚವಾರೆಪ್ಪ ಎಂಬವರ ಸಾವಿಗೂ ಆರ್ ಟಿಪಿಎಸ್ ಹಾರೋಬೂದಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ರಸಾಯನಶಾಸ್ತ್ರ ತಜ್ಞರು ಸಹ ಹಾರೋಬೂದಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಹಾರೋ ಬೂದಿ ಹೊಂಡಗಳು ತುಂಬಿದ್ದು ಅದನ್ನ ಸಾಗಣೆ ಮಾಡುವ ವಾಹನಗಳು ರಸ್ತೆಯಲ್ಲೆಲ್ಲಾ ಚೆಲ್ಲಿಕೊಂಡು ಹೋಗುವುದು ಒಂದೆಡೆಯಾದರೆ. ಈಗ ಮಧ್ಯರಾತ್ರಿ ವೇಳೆ ಚಿಮಣಿಗಳ ಮೂಲಕ ನೇರವಾಗಿ ಗಾಳಿಗೆ ಬಿಡುತ್ತಿರುವ ಹಾರೋಬೂದಿ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ವಾಹನಗಳು, ಮನೆಯಲ್ಲಿನ ವಸ್ತುಗಳೆಲ್ಲಾ ಧೂಳು ಧೂಳಾಗುತ್ತಿವೆ. ಇದರಿಂದ ಆಕ್ರೋಶಗೊಂಡಿರುವ ಜನ ಆರ್ ಟಿಪಿಎಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ಗ್ರಾಮಸ್ಥರು ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ. ಗ್ರಾಮಸ್ಥರ ಸಮಸ್ಯೆಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
https://www.youtube.com/watch?v=cEo_Q4reUAg