ಹಿಂದೆ ಉದ್ಯಮ ಬೆಳೆದಾಗ ನಿರ್ದಿಷ್ಟ ವ್ಯಕ್ತಿಗೆ ಮಾರುವಂತೆ ಒತ್ತಡ ಇತ್ತು, ಈಗ ಯಾರೂ ಒತ್ತಡ ಹೇರಲ್ಲ : ಏರ್‌ಸೆಲ್‌ ಸಂಸ್ಥಾಪಕ ಶಿವಶಂಕರನ್

Public TV
2 Min Read
Aircel founder C Sivasankaran

– ಈಗ ಉದಾರೀಕರಣಗೊಂಡ ಭಾರತವಾಗಿ ಬದಲಾಗಿದೆ
– ಹಣಕಾಸು ಸಮಸ್ಯೆಯಿಂದ 2018ರಲ್ಲಿ ಮಾರುಕಟ್ಟೆಯಿಂದ ಏರ್‌ಸೆಲ್‌ ನಿರ್ಗಮನ

ನವದೆಹಲಿ: ಹಿಂದೆ ಉದ್ಯಮ (Business) ಬೆಳೆಯಲು ಪ್ರಾರಂಭಿಸಿದರೆ ನಿರ್ದಿಷ್ಟ ವ್ಯಕ್ತಿಗೆ ಮಾರಾಟ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಏರ್‌ಸೆಲ್ ಸಂಸ್ಥಾಪಕ ಚಿನ್ನಕಣ್ಣನ್ ಶಿವಶಂಕರನ್ (Aircel founder C Sivasankaran) ಸ್ಪೋಟಕ ಆರೋಪ ಮಾಡಿದ್ದಾರೆ.

ಈಗ ನೀವು ವ್ಯವಹಾರ  ಆರಂಭಿಸಿದ್ದರೆ ನಿಮ್ಮ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ. ನಿಮಗೆ ಬೇಕಾದುದನ್ನು ನೀವು ಮಾಡಬಹುದು ಎಂದು ಹೇಳಿದರು.

ಏರ್‌ಸೆಲ್‌ ಕಂಪನಿಯು ಹಣಕಾಸಿನ ಸಮಸ್ಯೆಗಳಿಂದಾಗಿ ಫೆಬ್ರವರಿ 2018 ರಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಿತ್ತು. ಸಂದರ್ಶನವೊಂದರಲ್ಲಿ ಶಿವಶಂಕರನ್ ಮಾತನಾಡಿದ್ದು ಈಗ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದೆ.

ತಮಿಳುನಾಡು ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ಶಿವಶಂಕರನ್ ಅವರ ವಿಡಿಯೋವನ್ನು ಅಪ್ಲೋಡ್‌ ಮಾಡಿ, ಯುಪಿಎ (UPA) ಆಡಳಿತದಲ್ಲಿ ಉದ್ಯಮಿಗಳಿಗೆ ಬೆದರಿಕೆ ಇದ್ದ ಕಾರಣ ಭಾರತದ ಅಭಿವೃದ್ಧಿಗೆ ಹಿನ್ನಡೆಯಾಗಿತು. ಏರ್‌ಸೆಲ್ ಸಂಸ್ಥಾಪಕ ಶಿವಶಂಕರನ್ ಅವರ ಹೇಳಿಕೆಯು ನಮ್ಮ ದೇಶದ ಸಂಪತ್ತಿನ ಸೃಷ್ಟಿಕರ್ತರು ಇಂದು ನಮ್ಮ ಪ್ರೀತಿಯ ಪ್ರಧಾನಿ ಮೋದಿ (Narendra Modi) ಅವರ ನೇತೃತ್ವದಲ್ಲಿ ಎಷ್ಟು ಸುಲಭವಾಗಿ ಶ್ರಮಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬರೆದಿದ್ದಾರೆ.  ಇದನ್ನೂ ಓದಿ: ಮತಗಟ್ಟೆ ದತ್ತಾಂಶ ಅಪ್ಲೋಡ್ ಮಾಡುವುದು ಕಷ್ಟ – ಸುಪ್ರೀಂ ಕೋರ್ಟ್‌

ಚಿನ್ನಕಣ್ಣನ್‌ ಹೇಳಿದ್ದೇನು?
ನಾನು ಡೀಲ್‌ನಿಂದ ಕೇವಲ 3,400 ಕೋಟಿ ರೂಪಾಯಿಗಳನ್ನು ಮಾಡಿದ್ದೇನೆ. ಒಂದು ವೇಳೆ AT&T ಮಾರಾಟ ಮಾಡಿದ್ದರೆ ನನಗೆ 8 ಶತಕೋಟಿ ಸಿಗುತ್ತಿತ್ತು. ಇಂದು ಯಾರೂ ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. 10 ವರ್ಷದ ಹಿಂದೆ ನಿರ್ದಿಷ್ಟ ವ್ಯಕ್ತಿಗೆ ಕಂಪನಿಯನ್ನು ಮಾರಾಟ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು. ವ್ಯವಹಾರದಲ್ಲಿ ರಾಜಕಾರಣಿಗಳು ಮಧ್ಯಪ್ರವೇಶಿಸಿದ್ದರಿಂದ ನಾನು ನಷ್ಟ ಅನುಭವಿಸಿದೆ ಎಂದು ತಿಳಿಸಿದರು.

 

ಈಗ ನೀವು ವ್ಯಾಪಾರವನ್ನು ಆರಂಭಿಸಿದರೂ ಯಾರೂ ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಈಗ ಉದಾರೀಕರಣಗೊಂಡ ಭಾರತವಾಗಿ ಬದಲಾಗಿದೆ. ಅವರು ನನಗೆ ಮಾರಾಟ ಮಾಡಲು ಒತ್ತಡ ಹೇರಿದ್ದರು ಎನ್ನುವುದು ನನ್ನ ದೂರು ಅಲ್ಲ. ನನ್ನ ದೂರು ನನಗೆ 8 ಶತಕೋಟಿ ಆಫರ್ ಮಾಡಿದವರಿಗೆ ಮಾರಾಟ ಮಾಡಲು ಅವರು ನನಗೆ ಅವಕಾಶ ನೀಡಬೇಕಾಗಿತ್ತು ಎಂದರು.

ಹಣಕಾಸಿನ ಸಮಸ್ಯೆಗಳಿಂದಾಗಿ ಏರ್‌ಸೆಲ್‌ ಕಂಪನಿ ಫೆಬ್ರವರಿ 2018 ರಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಿತು. 2006 ರಲ್ಲಿ ಶ್ರೀಲಂಕಾದ ತಮಿಳು ಮೂಲದ ಮಲೇಷಿಯಾದ ಪ್ರಜೆ ಆನಂದ ಕೃಷ್ಣನ್ ಒಡೆತನದ ಮ್ಯಾಕ್ಸಿಸ್ ಬರ್ಹಾದ್ 74% ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಏರ್‌ಸೆಲ್ ಅನ್ನು ಸ್ವಾಧೀನಪಡಿಸಿಕೊಂಡಿತು. ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದ 2011 ರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಪಾಲನ್ನು ಮ್ಯಾಕ್ಸಿಸ್‌ಗೆ ಮಾರಾಟ ಮಾಡುವಂತೆ ನನ್ನ ಮೇಲೆ ಒತ್ತಡ ಇತ್ತು ಎಂದು ಶಿವಶಂಕರನ್ ಆರೋಪಿಸಿದ್ದರು.

Share This Article